ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ : ಲೋಖಂಡೆ

ಕಲಬುರಗಿ,ಜೂ.10-ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ತಜ್ಞರು ಮತ್ತು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಅಲೆಯನ್ನು ಎದುರಿಸಲು ಮಹಾನಗರ ಪಾಲಿಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.
“ಸಂಜೆವಾಣಿ” ಜತೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ತಜ್ಞರು ಮತ್ತು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಈ ಮೂರನೇ ಅಲೆಯನ್ನು ಯಾವ ರೀತಿ ಎದುರಿಸಬೇಕು ಎಂಬುವುದರ ಕುರಿತು ಈಗಾಗಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
@12bc = ಚೈಲ್ಡ್ ಫ್ರೆಂಡ್ಲಿ ಮಾಸ್ಕ್
ಮಕ್ಕಳ ಮುಖಕ್ಕೆ ಹೊಂದುವಂತಹ ಮತ್ತು ಮಾಸ್ಕ್ ಧರಿಸಲು ಉತ್ತೇಜನ ನೀಡುವಂತಹ ಮಾಸ್ಕ್ ಗಳ ತಯಾರಿಕೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮಕ್ಕಳಿಗಾಗಿಯೇ ” ಚೈಲ್ಡ್ ಫ್ರೆಂಡ್ಲಿ ಮಾಸ್ಕ್”ಗಳನ್ನು ತಯಾರಿಸುವ ಕುರಿತು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಈ ಸಂಬಂಧ ಮಕ್ಕಳಿಗಾಗಿಯೇ ವಿಶೇಷವಾದ ಮಾಸ್ಕ್ ಗಳು ರೆಡಿಯಾಗಲಿವೆ ಎಂದು ಲೋಖಂಡೆ ತಿಳಿಸಿದರು.
ಇದೆಲ್ಲದರ ಜೊತೆಗೆ ನಗರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರದೆಲ್ಲೆಡೆ ಈಗಾಗಲೆ ಸ್ಯಾನಿಟೈಸ್ ಮಾಡಲಾಗಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ಮೂರನೇ ಅಲೆ ಎದುರಿಸಲು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.