ಕೋವಿಡ್ ಮುಕ್ತ ಗ್ರಾಮಗಳನ್ನಾಗಿಸಲು ಕ್ರಮ ವಹಿಸಿ

ಬೀದರ:ಮೇ.29: ಜಿಲ್ಲೆಯ ಗ್ರಾಮಗಳನ್ನು ಕೋವಿಡ್‍ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್ ನಿರ್ವಹಣೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಸೋಂಕು ಕಾಣಿಸಿಕೊಂಡ ಗ್ರಾಮಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು. ಒಂದೇ ಒಂದು ಪ್ರಕರಣ ಕಾಣಿಸಿಕೊಳ್ಳದ ಗ್ರಾಮಗಳಲ್ಲಿ ಮುಂದೆಯೂ ಸೋಂಕು ಬಾರದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಹೆಚ್ಚಿನ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಕಡಿಮೆಯಾಗುತ್ತಿರುವುದು ಸಮಾಧಾನದ ಸಂಗತಿ. ಆದರೂ, ಇಷ್ಟಕ್ಕೇ ಸುಮ್ಮನಾಗುವಂತಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ, ಆಮ್ಲಜನಕ, ವೆಂಟಿಲೇಟರ್, ರೆಮ್‍ಡಿಸಿವಿರ್ ಇಂಜಕ್ಷನ್ ಸೇರಿದಂತೆ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ಕೊಡುವ ಕಾರ್ಯ ಏಕಕಾಲಕ್ಕೆ ನಡೆಯಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಲವರಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಕಲಬುರ್ಗಿ ಸೇರಿ ವಿವಿಧೆಡೆ ಚಿಕಿತ್ಸೆ ಪಡೆದಿದ್ದಾರೆ ಎಂದು ಡಿಎಚ್‍ಒ ಡಾ. ವಿ.ಜಿ. ರೆಡ್ಡಿ ತಿಳಿಸಿದರು.

ಕೊರೊನಾ ತಡೆಯುವ ನಿಟ್ಟಿನಲ್ಲಿ ಎಲ್ಲರೂ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು. ಸುರಕ್ಷಿತ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸುವುದು ಮುಂದುವರೆಸಬೇಕು ಎಂದರು.

ಪ್ರತ್ಯೇಕ ವಾರ್ಡ್: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎರಡು ಪ್ರತ್ಯೇಕ ವಾರ್ಡ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿಗಳಾದ ಗರಿಮಾ ಪನ್ವಾರ್, ಭುವನೇಶ ಪಾಟೀಲ, ಕೆಎಎಸ್ ಪ್ರೊಬೇಷನರಿ ಅಧಿಕಾರಿ ವೆಂಕಟ ಲಕ್ಷ್ಮಿ, ಅಶ್ವಿನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರತಿಕಾಂತ ಸ್ವಾಮಿ, ಆರ್‍ಸಿಎಚ್ ಅಧಿಕಾರಿ ಡಾ. ರಾಜಶೇಖರ ಇದ್ದರು