ಕೋವಿಡ್ ಮುಕ್ತ ಗ್ರಾಮಗಳನ್ನಾಗಿಸಲು ಪಿಡಿಓಗಳು ಕಾರ್ಯತತ್ಪರರಾಗಿ

(ಸಂಜೆವಾಣಿ ವಾರ್ತೆ)
ಬೀದರ:ಮೇ.21: ಕೋವಿಡ್ ಲಕ್ಷಣವುಳ್ಳವರು ತಪಾಸಣೆಯಿಂದ ಬಿಟ್ಟು ಹೋಗಬಾರದು ಎನ್ನುವ ಮಹತ್ವದ ಮನೆಮನೆ ಭೇಟಿ ಆರೋಗ್ಯ ತಪಾಸಣೆ ಅಭಿಯಾನಕ್ಕೆ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ತಾಲೂಕಿನ ನಾಗೋರಾ ಗ್ರಾಮದಲ್ಲಿ ವಿದ್ಯುಕ್ತ್ ಚಾಲನೆ ನೀಡಿದರು.
ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪೂರ ಅವರೊಂದಿಗೆ ಸಚಿವರು ಗ್ರಾಮದ ರವೀಂದ್ರ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ನಾಗೋರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ಅವರ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಾದ ನಿರ್ಮಲಾ ಮತ್ತು ಪ್ರಮಿಳಾ ಅವರು, ರೆಡ್ಡಿ ಕುಟುಂಬದ ಸದಸ್ಯರಾದ ಶ್ರೀದೇವಿ, ಓಂಕಾರ, ನಿಖಲ್ ಅವರ ದೇಹದ ತಾಪಮಾನ ಮತ್ತು ಅವರ ಫಲ್ಸ್ ರೇಟ್ ಪರೀಕ್ಷಿಸಿ ಆರೋಗ್ಯ ತಪಾಸಣೆ ನಡೆಸಿದರು.
ವಾರದೊಳಗಡೆ ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು, ಗಂಟಲು ನೋವು ಇದ್ದರೆ, ದೇಹದ ತಾಪಮಾನ 38ಕ್ಕಿಂತ ಹೆಚ್ಚಿಗೆ ಇದ್ದರೆ ಅಂತವರಿಗೆ ರ್ಯಾಟ್ ತಪಾಸಣೆ ನಡೆಸುತ್ತೇವೆ ಎಂದು ಇದೆ ವೇಳೆ ಆರೋಗ್ಯ ಕಾರ್ಯಕರ್ತರು ಸಚಿವರಿಗೆ ಅಭಿಯಾನದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ಅತ್ಯಂತ ಮಹತ್ವದ ಈ ಅಭಿಯಾನವು ಆಯಾ ಪಿಡಿಓ ಅವರ ನೇತೃತ್ವದಲ್ಲಿ ಬೀದರ ಜಿಲ್ಲೆಯಾದ್ಯಂತ ಎಲ್ಲ ಗ್ರಾಮಗಳಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಇದೆ ವೇಳೆ ಸಚಿವರು ತಿಳಿಸಿದರು.
ಕೋವಿಡ್ ಸಹಾಯವಾಣಿ: ನಾಗೋರಾ ಗ್ರಾಪಂ ವ್ಯಾಪ್ತಿಯ ಸಾತೋಳಿ, ಯಾಕತಪುರ, ಘೋಡಂಪಳ್ಳಿ, ನಾಗೋರಾ ಮತ್ತು ಮಿರ್ಜಾಪುರ ಗ್ರಾಮಗಳನ್ನು ಒಳಗೊಂಡು ಕೋವಿಡ್ 19 ಸಹಾಯವಾಣಿ ಆರಂಭಿಸಿ ಉತ್ತಮ ಕಾರ್ಯ ಮಾಡಲಾಗುತ್ತಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದರು.
ಗ್ರಾಪಂ ಕೊವಿಡ್ ಮಾಹಿತಿ: ನಾಗೋರಾದಲ್ಲಿ 2775 ಜನಸಂಖ್ಯೆ ಪೈಕಿ 7 ಜನರಿಗೆ, ಯಾಕತಪುರದಲ್ಲಿನ 3234 ಜನಸಂಖ್ಯೆ ಪೈಕಿ ಮೂವರಿಗೆ ಮತ್ತು ಸಾತೋಳಿ ಗ್ರಾಮದ 2240 ಜನಸಂಖ್ಯೆ ಪೈಕಿ ಮೂವರಿಗೆ ಕೋವಿಡ್ ಪಾಜೀಟೀವ್ ಆಗಿರುವ ಬಗ್ಗೆ ಮಾಹಿತಿ ಇದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಂ ಅವರು ಸಚಿವರಿಗೆ ಮಾಹಿತಿ ನೀಡಿದರು.
ಕೋವಿಡ್ ಲಸಿಕಾ ಕಾರ್ಯಾಚರಣೆ: 45 ವರ್ಷ ಮೇಲ್ಪಟ್ಟವರು ಮೊದಲನೇ ಲಸಿಕೆಯನ್ನು ನಾಗೋರಾದ 230 ಜನರು, ಟಿ ಮಿರ್ಜಾಪುರದಲ್ಲಿ 100, ಘೋಟಂಪಳ್ಳಿಯಲ್ಲಿ 110 ಜನರು, ಯಾಕತಪುರದಲ್ಲಿ 270 ಜನರು ಮತ್ತು ಸಾತೋಳಿನಲ್ಲಿ 120 ಜನರು ಪಡೆದುಕೊಂಡಿದ್ದಾರೆ. ಎರಡನೇ ಲಸಿಕೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಇದೆ ವೇಳೆ ನಾಗೋರಾ ಪಿಡಿಓ ಹೊಸಮನಿ ಗಾಯತ್ರಿದೇವಿ ಅವರು ಸಚಿವರಿಗೆ ಮಾಹಿತಿ ನೀಡಿದರು.
ಸ್ಥಳದಲ್ಲೇ ರ್ಯಾಟ್ ಪರೀಕ್ಷೆ: ಮನೆಮನೆ ಭೇಟಿ ಆರೋಗ್ಯ ತಪಾಸಣೆ ಬಳಿಕ ಸಚಿವರು, ಗ್ರಾಮದ ಗ್ರಂಥಾಲಯ ಪಕ್ಕದ ಜಾಗದಲ್ಲಿ ಜ್ಚರ ಕೆಮ್ಮು ನೆಗಡಿ ಲಕ್ಷಣವಿರುವವರಿಗೆ ನಡೆಸುತ್ತಿದ್ದ ಕೋವಿಡ್ ರ್ಯಾಟ್ ತಪಾಸಣೆಯನ್ನು ಗಮನಿಸಿದರು. ಟಿಎಚ್‍ಓ ಡಾ.ಸಂಗಾರೆಡ್ಡಿ, ಎಂಎಲ್‍ಎಚ್‍ವಿ ಇಮಾನ್ವೆ ಮತ್ತು ಎಎನ್‍ಎಂ ಝರೆಮ್ಮ ಅವರು ಸ್ಥಳದಲ್ಲಿಯೇ ಕೆಲವರಿಗೆ ರ್ಯಾಟ್ ಪರೀಕ್ಷೆ ನಡೆಸಿದರು.