ಕೋವಿಡ್ ಮಾರ್ಗಸೂಚಿ ಸರಿಯಾಗಿ ಪಾಲಿಸಿ: ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ,ಮಾ30: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಅಧಿಕವಾಗುತ್ತಿದೆ. ಜಿಲ್ಲೆಯ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯ. ಈ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಜರುಗಿದ ಕೋವಿಡ್ ನಿಯಂತ್ರಣ ಕುರಿತು ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಭ್ಯಸಿಸುವ ಮಕ್ಕಳಿಗೆ ಕೋವಿಡ್ ಸೋಂಕು ತಗಲುವ ಸಾಧ್ಯತೆಗಳಿದ್ದು ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪಾಲನೆಯನ್ನು ಶಾಲಾ ಮುಖ್ಯಸ್ಥರು ಹಾಗೂ ವಸತಿ ನಿಲಯಗಳ ಮುಖ್ಯಸ್ಥರು ಸರಿಯಾಗಿ ಪಾಲಿಸಬೇಕೆಂದು ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಕಾಲಕಾಲಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವಂತೆ ತಿಳಿಸಿದರು.
ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ಆರೋಗ್ಯ ಇಲಾಖೆಯ ತಪಾಸಣಾ ತಂಡವು ಕಾರ್ಯಪ್ರವೃತ್ತರಾಗಿ ಶೀರ್ಘವೇ ಕೋವಿಡ್ ತಪಾಸಣೆಗೆ ಒಳಪಡಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ್ ಅವರಿಗೆ ಸೂಚಿಸಿದರು.
ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಬಿ.ಆರ್.ಸಿ ಹಾಗೂ ಸಿ.ಆರ್. ಸಿ ಅಧಿಕಾರಿಗಳಿಗೆ ಶಾಲಾ ಮಟ್ಟದಲ್ಲಿ ಎಸ್.ಓ.ಪಿ. ಪಾಲನೆ ಕುರಿತು ತೆಗೆದುಕೊಂಡಿರುವ ಕ್ರಮಗಳ ಕುರಿತು ಪ್ರತಿ ದಿನ ವರದಿಯನ್ನು ಉಪನಿರ್ದೇಶಕರು ತರಿಸಿಕೊಳ್ಳುವಂತೆ ಸೂಚಿಸಿದರು. ಒಟ್ಟಾರೆ ಕೋವಿಡ್ ಸೋಂಕಿನಿಂದ ಆಗುವ ಜೀವಹಾನಿಯನ್ನು ತಪ್ಪಿಸಲು ಅಗತ್ಯದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಮಾತನಾಡಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಮಕ್ಕಳಲ್ಲಿ ಕೋವಿಡ್ ಸೋಂಕಿನ ಕುರಿತು ಜಾಗೃತಿ ಮೂಡಿಸಿ ಸೋಂಕಿನಿಂದ ಆಗುವ ಜೀವ ಹಾನಿ ತಪ್ಪಿಸಲು ಕ್ರಮ ವಹಿಸುವಂತೆ ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರವಿ ಗುಂಜೀಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಹೊಸಮನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ, ಶಿಕ್ಷಣ ಇಲಾಖೆ ಗಣೇಶ ಬಾರಾಟಕ್ಕೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ್ ಸೇರಿದಂತೆ ಇತರರು ಇದ್ದರು.