ಕೋವಿಡ್ ಮಾರ್ಗಸೂಚಿ ಪಾಲಿಸದ ಕೇಂದ್ರಗಳ ಪರವಾನಿಗೆ ರದ್ದು: ಜಿಲ್ಲಾಧಿಕಾರಿ

ಧಾರವಾಡ, ಏ.5: ಕರ್ನಾಟಕ ಸರ್ಕಾರ ಕೋವಿಡ್ 19 ರ 2ನೇ ಅಲೆ ತಡೆಯುವ ಕ್ರಮವಾಗಿ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸ್ಯಾನಿಟೈಸರ್, ಹ್ಯಾಂಡ್ ವಾಷ್ ಬಳಕೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕಿದ್ದು, ಕೊಚಿಂಗ್ ಸೆಂಟರ್, ಪಿ.ಜಿ ಕೇಂದ್ರಗಳು ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳಲ್ಲಿ ಈ ನಿಯಮಗಳ ಪಾಲನೆ ಆಗುತ್ತಿಲ್ಲ. ಪಾಲಿಕೆ ಹಾಗೂ ಪೊಲೀಸ್ ಇಲಾಖೆಯಿಂದ ವರದಿ ಪಡೆದು ಅಂತಹ ಕೇಂದ್ರಗಳ ಲೈಸನ್ಸ್ ರದ್ದುಪಡಿಸಿ, ಅದರ ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ (ಕೊಚಿಂಗ್ ಸೆಂಟರ್), ಪಿ.ಜಿ ಕೇಂದ್ರಗಳ ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳ ಮಾಲೀಕರ ಹಾಗೂ ನಿರ್ವಾಹಕರ ಸಭೆ ಜರುಗಿಸಿ, ಮಾತನಾಡಿದರು.
ಕೋವಿಡ್ ಮಾರ್ಗಸೂಚಿಗಳ ಪಾಲನೆಗಾಗಿ ಎಲ್ಲ ವಾಣಿಜ್ಯ ಕೇಂದ್ರಗಳಿಗೆ ಹಾಗೂ ಅಂಗಡಿ ವ್ಯಾಪಾರಿಗಳಿಗೆ ತಿಳುವಳಿಕೆ ನೀಡಲಾಗಿದೆ. ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಕೊಚಿಂಗ್ ಸೆಂಟರ್, ಪಿ.ಜಿ ಕೇಂದ್ರಗಳು ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳಲ್ಲಿ ಪ್ರತಿದಿನ ಕಾರ್ಯಾಚರಣೆ ನಡೆಸಿ, ದಂಡ ವಿಧಿಸುತ್ತಿದ್ದಾರೆ ಮತ್ತು ಎಚ್ಚರಿಕೆಯ ನೋಟಿಸ್ ನೀಡುತ್ತಿದ್ದಾರೆ. ಆದರೂ ಕೇಲವು ಕೇಂದ್ರದವರು ಉದಾಸೀನತೆ ಮತ್ತು ನಿಲ್ರ್ಯಕ್ಷ ವಹಿಸುತ್ತಿರುವುದು ಕಂಡು ಬರುತ್ತಿದೆ.
ವಿದ್ಯಾಥಿಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿ, ಸಾಮಾಜಿಕ ಅಂತರ ಪಾಲನೆ ಮಾಡದಿದ್ದಲ್ಲಿ ಮತ್ತಷ್ಟು ಕೋವಿಡ್ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಸರಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಗಂಭೀರವಾಗಿ ಪರಿಗಣಿಸಿ, ಪಾಲಿಸದಿದ್ದರೆ ಅಂತಹ ಕೇಂದ್ರಗಳ ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಮತ್ತು ಇಂತಹ ಸ್ಥಳ ಹಾಗೂ ಕೇಂದ್ರಗಳನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಮಾತನಾಡಿ, ಈಗಾಗಲೇ ಕೊಚಿಂಗ್ ಸೆಂಟರ್, ಪಿ.ಜಿ ಕೇಂದ್ರಗಳ ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳ ಮಾಲೀಕರ ಸಭೆ ಜರುಗಿಸಿ, ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರತಿ ಕೇಂದ್ರದಲ್ಲಿ ಕನಿಷ್ಟ 2 ಸಿಸಿ ಕ್ಯಾಮರಾ ಅಳವಡಿಸಲು, ಸ್ವಚ್ಛತೆ ಕಾಪಾಡಲು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಮಹಿಳಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಪ್ರತಿಯೊಬ್ಬರಿಗೂ ತಮ್ಮ ಕೇಂದ್ರದ ಗುರುತಿನ ಚೀಟಿ ನೀಡುವಂತೆ ಸೂಚಿಸಲಾಗಿದೆ. ಬಹುತೇಕರು ಈ ಸೂಚನೆಗಳನ್ನು ಪಾಲನೆ ಮಾಡದಿರುವುದು ಕಂಡು ಬಂದಿದೆ. ಇನ್ನೊಮ್ಮೆ ಈ ಎಲ್ಲ ಕೇಂದ್ರಗಳ ಪರಿಶೀಲಿಸಿ, ಪರವಾನಿಗೆ ರದ್ದುಪಡಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಡಾ.ಗೋಪಾಲ ಕೃಷ್ಣ ಬಿ., ಪ್ರಭಾರ ಅಪರ ಜಿಲ್ಲಾಧಿಕಾರಿ ರುದ್ರೇಶ ಇದ್ದರು.
ಸಭೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ (ಕೊಚಿಂಗ್ ಸೆಂಟರ್), ಪಿ.ಜಿ ಕೇಂದ್ರಗಳ ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳ ಮಾಲೀಕರ ಹಾಗೂ ನಿರ್ವಾಹಕರು ಭಾಗವಹಿಸಿದ್ದರು.