ಕೋವಿಡ್ ಮಾರ್ಗಸೂಚಿ ಪಾಲನೆ ಆರೋಗ್ಯ ಇಲಾಖೆಯ ತಂಡಗಳು ಭೇಟಿ

ಸಂಜೆವಾಣಿ ವಾರ್ತೆ
ಹೊಸಪೇಟೆ:  ಸೋಮವಾರ ಹೊಸಪೇಟೆಯ ಶಾಪಿಂಗ್ ಮಾಲ್‍ಗಳು, ಶಾಲೆಗಳು ಸೇರಿ ಜನರು ಗುಂಪಾಗಿ ಸೇರುವ ಪ್ರದೇಶಗಳಲ್ಲಿ  ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಮವಾರ ಕೋವಿಡ್ ತಪಾಸಣೆ ನಡೆಸಿದರು.
ಸರಕಾರದ ಮಾರ್ಗಸೂಚಿಯಂತೆ ಹೆಚ್ಚಿನ ಜನರು ಸೇರುವ ಪ್ರದೇಶಗಳು ಹಾಗೂ ಕೊರೋನಾ ಹಾಟ್‍ಸ್ಪಾಟ್ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರತಿ 15 ದಿನಗಳಿಗೊಮ್ಮೆ ಕೊರೋನಾ ತಪಾಸಣೆ ನಡೆಸಬೇಕು ಮತ್ತು ಎರಡೂ ಡೋಸ್ ಲಸಿಕೆ ಪಡೆದಿರಬೇಕು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ 6 ತಂಡಗಳನ್ನು ರಚಿಸಿದ್ದು, ತಪಾಸಣೆ ನಡೆಸುತ್ತಿದೆ.
ನಗರದ ಕಾಲೇಜು ರಸ್ತೆಯಲ್ಲಿರುವ ಶಾಲೆಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಸೋಮವಾರ ತಪಾಸಣೆ ನಡೆಸಲಾಯಿತು. ಜತೆಗೆ ಕೊರೋನಾ ಕುರಿತು ಜಾಗೃತಿ ವಹಿಸುವಂತೆ ಸಲಹೆ ನೀಡಲಾಯಿತು.
ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್ ಸೋಂಕು ಪತ್ತೆಯಾದ ಬಳಿಕ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಜನರು ಸರ್ಕಾರದ ಕೊರೋನಾ ಮಾರ್ಗದರ್ಶಿಗಳನ್ನು ಪಾಲಿಸುವಂತೆ ಇಲಾಖೆಯ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.