ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ : ಜಿಲ್ಲಾಧಿಕಾರಿ

ಬಾಗಲಕೋಟೆ,ಏ.20 : ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆಯಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮಾರ್ಗಸೂಚಿಗಳನ್ನು ಅನುಸರಿಸಿ ನಿಯಂತ್ರಣಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಸಾರ್ವಜನಿಕ ಸಭೆ, ಸಮಾರಂಭ, ಜಾತ್ರೆ ಹಾಗೂ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಮದುವೆ ಸಮಾರಂಭ ಒಳಾಂಗಣವಾಗಿದ್ದರೆ 100 ಜನರಿಗೆ, ಹೊರಾಂಗಣವಾಗಿದ್ದರೆ 200 ಜನರಿಗೆ ಮಾತ್ರ ಅವಕಾಶವಿರುತ್ತದೆ. ಮದುವೆಗಳಿಗೆ ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೇ ಉಪವಿಭಾಗಾಧಿಕಾರಿಗಳಿಂದ ಮದುವೆಗೆ ಅನುಮತಿ ಪಡೆಯಬೇಕು. ಅಂತ್ಯ ಸಂಸ್ಕಾರ ಸಂದರ್ಭದಲ್ಲಿ 25 ಜನರಿಗೆ ಮಾತ್ರ ಅವಕಾಶವಿದೆ. ಸ್ವಿಮಿಂಗ್ ಫೂಲ್ ಮತ್ತು ಜಿಮ್‍ಗಳನ್ನು ಬಂದ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗುಂಪಾಗಿ ತಿರುಗಾಡುವದನ್ನು ನಿಷೇದಿಸಿದ್ದು, ಜ್ವರ, ಕೆಮ್ಮು ಉಸಿರಾಟದ ತೊಂದರೆ ಕಂಡು ಬಂದರೆ ಕೂಡಲೇ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಕೋವಿಡ್ ಪಾಸಿಟಿವ್ ದೃಡಪಟ್ಟರೆ ಆಸ್ಪತ್ರೆಗೆ ದಾಖಲಾಗಬೇಕು. ಇಲ್ಲವೇ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳತಕ್ಕದ್ದು. ಕೋವಿಡ್ ಪಾಸಿಟಿವ್ ಸಂಪರ್ಕದಲ್ಲಿದ್ದವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೂ ಸಹ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಹೊರ ರಾಜ್ಯಗಳಿಗೆ ಪ್ರಯಾಣವಿದ್ದಲ್ಲಿ ಮುಂದೂಡವುದು ಅವಶ್ಯವೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯ, ಐತಿಹಾಸಿಕ ಸ್ಮಾರಕ ವೀಕ್ಷಣೆ ತಾತ್ಕಾಲಿಕ ಬಂದ್
ಕೋವಿಡ್-19 ಎರಡನೇ ಅಲೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಗೃಹ, ಕಂದಾಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಧಾರ್ಮಿಕ ಕ್ಷೇತ್ರಗಳಾದ ಬಾದಾಮಿ ಬನಶಂಕರಿ ದೇವಸ್ಥಾನ, ತುಳಸಿಗೇರಿ ಹನಮಂತ ದೇವರ ದೇವಸ್ಥಾನ, ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನ, ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರಗಳನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ತಕ್ಷದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಮೇ 15 ವರೆಗೆ ಬಂದ್ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.