ಕೋವಿಡ್ ಮಾರ್ಗಸೂಚಿ ಕನ್ನಡದಲ್ಲಿ ನೀಡಲು ನಾಗಾಭರಣ ಆಗ್ರಹ

ಬೆಂಗಳೂರು.ಮೇ.೧- ಕೋವಿಡ್ ಮಾರ್ಗಸೂಚಿಗಳನ್ನು ಇಂಗ್ಲೀಷ್ ನಲ್ಲಿ ನೀಡುವುದನ್ನು ನಿಲ್ಲಿಸಿ ಅದನ್ನು ಕನ್ನಡದಲ್ಲಿ ನೀಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆ, ಕನ್ನಡದಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದರೆ ಅದನ್ನು ಜನರು ಬೇಗ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಹೀಗಾಗಿ ಇನ್ನು ಮುಂದೆ ಇಂಗ್ಲೀಷ್‌ನಲ್ಲಿ ಮಾಹಿತಿ ನೀಡುವುದನ್ನು ನಿಲ್ಲಿಸಿ ಕನ್ನಡದಲ್ಲಿ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದ್ದಾರೆ.
ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿ ರವಿ ಕುಮಾರ್ ಅವರಿಗೆ ಪತ್ರ ಬರೆದಿರುವ ನಾಗಾಭರಣ ಅವರು ಇನ್ನು ಮುಂದೆ ಕೋವಿಡ್ ನಿಯಮಗಳು ಮತ್ತು ಮಾರ್ಗಸೂಚಿಗಳು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಸರ್ಕಾರದ ಯಾವುದೇ ಮಾಹಿತಿ ಮತ್ತು ಮಾರ್ಗಸೂಚಿಗಳು ರಾಜ್ಯದ ಆಡಳಿತ ಭಾಷೆ ಕನ್ನಡದಲ್ಲಿ ಹೊರ ಬಿದ್ದಾಗ ಅದು ಜನರಿಗೆ ಬೇಗ ತಲುಪಲು ಸಹಕಾರಿಯಾಗಲಿದೆ. ಹೀಗಾಗಿ ಸರ್ಕಾರ ಇನ್ನು ಮುಂದೆ ಎಲ್ಲಾ ಮಾಹಿತಿ ಕನ್ನಡದಲ್ಲಿ ಹೊರಡಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಸಮಾಧಾನ:
ಇತ್ತೀಚೆಗೆ ಸರ್ಕಾರ ಎಲ್ಲಾ ಮಾರ್ಗಸೂಚಿ ಮತ್ತು ಸುತ್ತೋಲೆಯನ್ನು ಕನ್ನಡದಲ್ಲಿ ಹೊರಡಿಸಲಾಗುತ್ತಿದೆ. ಒಳ್ಳೆಯ ಬೆಳವಣಿಗೆಯಲ್ಲಿ ಎಂದೂ ಕೂಡ ಅವರು ಅಸಮಾಧಾನ ಅತೃಪ್ತಿ ಹೊರಹಾಕಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರು ಮಾರ್ಗಸೂಚಿಗಳನ್ನು ಬಹು ಬೇಗ ಅರ್ಥ ಮಾಡಿಕೊಳ್ಳಬೇಕಾದರೆ ಅದು ಕನ್ನಡದಿಂದ ಮಾತ್ರ ಸಾಧ್ಯ ಇನ್ನು ಮುಂದೆ ಎಲ್ಲಾ ಸುತ್ತೋಲೆಗಳು ಕನ್ನಡದಲ್ಲಿ ಇರಲಿ, ಅದನ್ನು ಬಿಟ್ಟು ಇಂಗ್ಲೀಷ್ ಸಂಸ್ಕೃತಿಯನ್ನು ಮುಂದುವರಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸುವ ಎಲ್ಲಾ ಸುತ್ತೋಲೆ ಮತ್ತು ಮಾರ್ಗಸೂಚಿಗಳು ಇಂಗ್ಲೀಷ್‌ನಲ್ಲಿ ಇರುವ ಬಗ್ಗೆ ಕನ್ನಡ ಪರ ಸಂಘಟನೆಗಳೂ ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.