ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ : ಗೌರವ್ ಎಚ್ಚರಿಕೆ

ಬೆಂಗಳೂರು, ಡಿ.೬- ಕೋವಿಡ್ ಪಾಸಿಟಿವ್ ಆದ ವ್ಯಕ್ತಿಗಳು ಜಿನೋಮ್ ಸೀಕ್ವೆನ್ಸ್ ಪರೀಕ್ಷೆ ಫಲಿತಾಂಶ ವರದಿ ಕೈ ಸೇರುವರೆಗೂ ಹೋಂ ಐಸೋಲೇಷನ್ ನಲ್ಲಿ ಕಡ್ಡಾಯವಾಗಿ ಇರಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಾಣು ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸ್) ಪರೀಕ್ಷೆಗಾಗಿ ಕೇಂದ್ರ ಸರ್ಕಾರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ನಾಲ್ಕು ಲ್ಯಾಬ್ ಗಳಿದ್ದು, ಪರೀಕ್ಷೆ ಫಲಿತಾಂಶ ಶೀಘ್ರದಲ್ಲೇ ಬರಲಿದೆ.ಅಲ್ಲಿಯವರೆಗೂ ಕೋವಿಡ್ ಪಾಸಿಟಿವ್ ವ್ಯಕ್ತಿಗಳು ಎಚ್ಚರವಹಿಸಬೇಕು ಎಂದರು.
ಸದ್ಯ ಒಮಿಕ್ರಾನ್ ಪತ್ತೆಯಾದ ದೇಶಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾಇಡಲಾಗಿದೆ.ಅವರನ್ನು ಕೋವಿಡ್ ಪರೀಕ್ಷೆ ಗೆ ಒಳಪಡಿಸಲಾಗಿದ್ದು, ಯಾರ ವರದಿ ಕೋವಿಡ್ ಪಾಸಿಟಿವ್ ಬಂದರೆ, ಅಂತಹ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಒಳಪಡಿಸಲಾಗುವುದು.ಬಳಿಕ ಈ ವರದಿ ಕೈಸೇರುವರೆಗೂ ಸೋಂಕಿತರು ಎಚ್ಚರದಿಂದ ಇರಬೇಕು ಎಂದು ತಾಕೀತು ಮಾಡಿದರು.
ಇನ್ನೂ, ನಾವು ಪ್ರತಿದಿನ ೧೫ ಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳಿಸುತ್ತಿದ್ದೇವೆ ಎಂದ ಅವರು, ಅಶೋಕ ಹೋಟೆಲ್ ನಲ್ಲಿ ವೈದ್ಯರ ಸಮಾವೇಶದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಪರೀಕ್ಷೆ ಮಾಡಲಾಗಿದೆ. ಜೊತೆಗೆ ಹೋಂ ಐಸೋಲೇಷನ್ ನಲ್ಲಿ ಇರಲು ಸೂಚಿಸಲಾಗಿದೆ ಎಂದರು.
ನಗರದಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ಸರ್ಕಾರದ ನಿಯಮನೂಸಾರ ನಡೆಸಬೇಕು. ಶಾಲೆ ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವಂತಿಲ್ಲ. ಒಂದು ವೇಳೆ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಮಂತ್ರಿಮಾಲ್ ಗೆ ಬೀಗ ಹಾಕಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಾಕಷ್ಟು ದಿನದ ವಿನಾಯಿತಿ ಮಂತ್ರಿ ಮಾಲ್ ಗೆ ನೀಡಿದ್ದೇವೆ.ಎಷ್ಟೆ ಎಚ್ಚರಿಕೆ ನೀಡಿದರು ತೆರಿಗೆ ಪಾವತಿ ವಿಚಾರದಲ್ಲಿ ಮಂತ್ರಿ ಮಾಲ್ ನಿರ್ಲಕ್ಷ್ಯ ವಹಿಸಿದೆ.ಹೀಗಾಗಿ,ಈ ಬಾರಿ ಮಂತ್ರಿ ಮಾಲ್ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಗುಪ್ತ ನುಡಿದರು.