ಕೋವಿಡ್ ಮಾರ್ಗಸೂಚಿಯನ್ವಯ ಧೀಮಂತ ನಾಯಕರ ಜನ್ಮ ದಿನಾಚರಣೆಗೆ ನಿರ್ಣಯ

ತುಮಕೂರು, ಮಾ.೨೭- ಜಿಲ್ಲಾಡಳಿತ ಹಾಗೂ ಸಂಘಟನೆಗಳೆಲ್ಲರ ಸಹಕಾರದೊಂದಿಗೆ ಕೋವಿಡ್ ಮಾರ್ಗಸೂಚನೆಯನ್ವಯ ಕಡಿಮೆ ಜನಸಂಖ್ಯೆ ಸೇರಿಸುವುದರೊಂದಿಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ೧೩೦ನೇ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ೧೧೪ನೇ ಡಾ. ಬಾಬು ಜಗಜೀವನರಾಂ ಜನ್ಮದಿನಾಚರಣೆಯನ್ನು ಏ. ೧೪ ರಂದು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಯಂತಿಯನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಧೀಮಂತ ನಾಯಕರಿಬ್ಬರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಮತ್ತು ಪಿಯುಸಿ ಕಾಲೇಜುಗಳಲ್ಲಿ ಪ್ರಬಂಧ ಸ್ವರ್ಧೆ ಏರ್ಪಡಿಸಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಮತ್ತು ಕಾನೂನು ಬಲ್ಲವರಿಂದ ಉಪನ್ಯಾಸ ಏರ್ಪಡಿಸಬೇಕು. ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ ೩ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಿಂದ ಇಬ್ಬರು ಸೇರಿ ಒಟ್ಟು ಐದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಬೇಕು.
ದಲಿತ ಸಂಘಟನೆಯ ಹತ್ತು ಮಂದಿ ಹೋರಾಟಗಾರರನ್ನು ಗುರುತಿಸಿ ಸನ್ಮಾನಿಸಬೇಕು. ಪ್ರಶಸ್ತಿಗೆ ಈಗಾಗಲೇ ಸನ್ಮಾನ ಪಡೆದವರನ್ನು ಪರಿಗಣಿಸದೆ ಹೊಸಬರಿಗೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಪ್ರಿಲ್ ೫ರಂದು ಡಾ. ಬಾಬು ಜಗಜೀವನ್‌ರಾಂ ಅವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರದ ಧೀಮಂತ ನಾಯಕರ ಆಚರಣೆ ಸಂಬಂಧ ನಡೆಯುತ್ತಿರುವ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸುವ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳ ಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ರಘು, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.