ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಸಿ ಮನವಿ

ದಾವಣಗೆರೆ, ಏ.23; ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ತಡೆ ಪ್ರಯತ್ನದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು. ಜಿಲ್ಲಾಡಳಿತ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತಾದ ಸರ್ಕಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಏಪ್ರಿಲ್ 21 ರಿಂದ ಮೇ 04 ರವರೆಗೆ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಸಂಬಂಧಿಸಿದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಅನುಷ್ಟಾನಗೊಳಿಸಲು ಸೂಚಿಸಲಾಗಿದೆ. ಹಾಗೂ ನಿಷೇಧಿತ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಮತ್ತು ಇತರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ರಾತ್ರಿ ಕರ್ಫ್ಯೂ : ಪ್ರತಿ ದಿನ ರಾತ್ರಿ 9 ರಿಂದ ಮಾರನೆ ದಿನದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಇರುತ್ತದೆ. ಈ ಸಂದರ್ಭದಲ್ಲಿ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಕಫ್ಯೂ ಇರುತ್ತದೆ. ಅಬಕಾರಿ ಮಾರ್ಗಸೂಚಿಗಳು: ರಾತ್ರಿ ಕರ್ಫ್ಯೂ ಅವಧಿಯಲ್ಲಿ ಮದ್ಯ, ಬಿಯರ್, ವೈನ್ ಮಾರಾಟ ಸನ್ನದುಗಳನ್ನು ಮುಚ್ಚಬೇಕು. ರೆಸ್ಟೋರೆಂಟ್‌ಗಳಲ್ಲಿ ಆಹಾರ ಮತ್ತು ತಿಂಡಿಗಳನ್ನು ಪಾರ್ಸೆಲ್ ರೂಪದಲ್ಲಿ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗೂ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ಗಳಲ್ಲಿರುವ ರೆಸ್ಟೋರೆಂಟ್‌ಗಳು ಕೇವಲ ಅಲ್ಲಿ ಉಳಿದುಕೊಂಡಿರುವ ಅತಿಥಿಗಳಿಗೆ ಮಾತ್ರ ಪಾರ್ಸೆಲ್ ನೀಡತಕ್ಕದ್ದು.  ಸ್ಟಾö್ಯಂಡ್‌ಅಲೋನ್ ಮದ್ಯದಂಗಡಿಗಳು, ಮದ್ಯ ಮಳಿಗೆಗಳು ಮತ್ತು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್ ರೂಪದಲ್ಲಿ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸನ್ನದುಗಳಲ್ಲಿ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯಾದ್ಯಂತ ಶುಕ್ರವಾರ ರಾತ್ರಿ 9 ಗಂಟೆಯಿAದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಮದ್ಯ, ಬಿಯರ್ ಮತ್ತು ವೈನ್ ಅನ್ನು ಮಾರಾಟ ಮಾಡುವ ಎಲ್ಲಾ ರೀತಿಯ ಅಬಕಾರಿ ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ. ಮದ್ಯ, ಬಿಯರ್ ಮತ್ತು ವೈನ್ ಅನ್ನು ಮಾರಾಟ ಮಾಡುವ ಎಲ್ಲಾ ರೀತಿಯ ಅಬಕಾರಿ ಸನ್ನದುಗಳ ಮುಚ್ಚುವ ಅವಧಿಯನ್ನು ರಾತ್ರಿ 9 ಗಂಟೆಗೆ ಸೀಮಿತಗೊಳಿಸಿದೆ. ಮೈಕ್ರೋಬ್ರಿವರಿಗಳಲ್ಲಿ ತಯಾರಾಗುವ ಬೀರ್ ಅನ್ನು ಗ್ಲಾಸ್, ಸೆರಾಮಿಕ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಕಂಟೈನರ್ ಗಳಲ್ಲಿ ಗರಿಷ್ಠ 2 ಲೀಟರ್‌ಗಳ ಮಿತಿಯವರೆಗೆ ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡಬಹುದಾಗಿದೆ. ಬಾಟಲ್ಡ್ ಬೀರ್ ಸನ್ನದನ್ನು ಹೊರತುಪಡಿಸಿ, ಡ್ರಾಟ್ ಬೀರ್ ಮಾರಾಟಕ್ಕೆ ಅವಕಾಶವಿರುವ ಆರ್‌ವಿಬಿ (ಪಬ್) ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ. ಯಾವುದೇ ಉಲ್ಲಂಘನೆ ಅಥವಾ ದುರುಪಯೋಗವಾದಲ್ಲಿ ಸಂಬಂಧಪಟ್ಟ ಸನ್ನದುದಾರರೇ ಜವಾಬ್ದಾರರಾಗುವುದದಲ್ಲದೇ ಸನ್ನದುಗಳನ್ನು ಅಮಾನತ್ತು ಅಥವಾ ರದ್ದುಗೊಳಿಸುವ ಕ್ರಮಗಳನ್ನೊಳಗೊಂಡಂತೆ ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರವನ್ನು ಇಲಾಖೆ ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.ಎಫ್‌ಐಆರ್ ದಾಖಲು-ಸಿಬ್ಬಂದಿಗಳ ವಜಾ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಕೋವಿಡ್ ಸೋಂಕಿಗೆ ನೀಡುವ ರೆಮಿಡಿಸಿವರ್ ಲಸಿಕೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು 9 ವಯಲ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಚಿಗಟೇರಿ ಜಿಲ್ಲಾಸ್ಪತ್ರೆಯ ಫಾರ್ಮಸಿ ವಿಭಾಗದ ಅಧಿಕಾರಿ ಮಂಜುನಾಥರಾವ್ ಜಿ ಮತ್ತು ಹೊರಗುತ್ತಿಗೆ ಆಧಾರದ ಗ್ರೂಪ್ ಡಿ ನೌಕರ ಗಣೇಶ್ ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ಅವರಿಂದ ರೂ.10 ಸಾವಿರ ನಗದು ಮತ್ತು ಒಂದು ಆಟೋರಿಕ್ಷಾವನ್ನು ಜಪ್ತು ಮಾಡಿಕೊಳ್ಳಲಾಗಿದೆ. ರಾಜ್ಯ ಡ್ರಗ್ ಕಂಟ್ರೋಲರ್ ಮಾರ್ಗದರ್ಶನದಲ್ಲಿ ಬಡಾವಣೆ ಪೊಲೀಸ್ ಠಾಣೆ ಅಧಿಕಾರಿಗಳು ಈ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಯಾರೂ ಕೂಡ ಅಕ್ರಮವಾಗಿ ಇಂತಹ ಲಸಿಕೆಗಳನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಕ್ರಮ ವಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮಾಡಲಾಗುವುದು ಎಂದ ಅವರು ಕೋವಿಡ್ ನಿರ್ವಹಣೆಗಾಗಿ ಎಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಮಾಸ್ಕ್ ಹಾಕದೇ ಇರುವವರ ವಿರುದ್ದ ಒಟ್ಟು 48,882 ಪ್ರಕರಣಗಳನ್ನು ದಾಖಲು ಮಾಡಿ ಏ.21 ರವರೆಗೆ 80,73,837 ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಟಿಯಲ್ಲಿ ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‌ಓ ಡಾ.ನಾಗರಾಜ್, ಡಿಎಸ್ ಡಾ.ಜಯಪ್ರಕಾಶ್ ಇದ್ದರು.