ಕೋವಿಡ್ ಮರಣ ಪ್ರಮಾಣ ತಗ್ಗಿಸುವತ್ತ ಹೆಚ್ಚು ಗಮನ ಕೊಡಿ:ಗೋವಿಂದ ಕಾರಜೋಳ

ಕಲಬುರಗಿ.ಏ.1:ಕೋವಿಡ್ ಎರಡನೆ ಅಲೆಯಿಂದ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಗ್ಗಿಸಲು ಹೆಚ್ಚು ಗಮನ ಕೊಡಿ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಕಲಬುರಗಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ಗುರುವಾರ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಬುರಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್-19 ಕುರಿತು ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕಿನಿಂದ ಮರಣ ಪ್ರಮಾಣ ತಗ್ಗಿಸಲು ಟೆಸ್ಟಿಂಗ್, ಟ್ರೇಸಿಂಗ್ ಮತ್ತು ಟ್ರೀಟ್‍ಮೆಂಟ್ ಚುರುಕುಗೊಳಿಸಬೇಕು. ಆರಂಭದಲ್ಲಿಯೆ ಸೋಂಕು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮರಣ ಪ್ರಮಾಣ ಕಡಿಮೆಗೊಳಿಸಲು ಸಾಧ್ಯ ಎಂದ ಅವರು ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿ ಬಂದ 20ಕ್ಕೂ ಹೆಚ್ಚ ಜನರನ್ನು ಪತ್ತೆ ಮಾಡಿ ಅವರನ್ನು ತಪಾಸಣೆಗೊಳಪಡಿಸಬೇಕು ಎಂದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವವರಲ್ಲಿ 21-30 ವಯಸ್ಸಿನವರು ಶೇ.32.93 ಇದ್ದರೆ 41-50 ವಯಸ್ಸಿನವರು ಶೇ.16.20 ಇದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಪೈಕಿ ಪುರುಷರ ಪ್ರಮಾಣ ಶೇ.60.61 ಇದ್ದು, ಈ ವರ್ಗದವರ ಮೇಲೆ ವಿಶೇಷ ನಿಗಾ ಇಡಬೇಕು. ಅನಗತ್ಯ ಓಡಾಡದಂತೆ ಇವರಿಗೆ ತಿಳಿಹೇಳಬೇಕು. ಮಾಸ್ಕ್ ಇಲ್ಲದೆ ಓಡಾಡುತ್ತಿದ್ದರೆ ದಂಡ ಹಾಕಬೇಕು. ಹೆಚ್ಚು ಪ್ರಯಾಣಿಕರನ್ನು ತೆಗೆದುಕೊಂಡು ಹೋಗುವ ವಾಹನಗಳ ಮೇಲೆಯೂ ಕಣ್ಣಿಡಬೇಕು. ವಾಣಿಜ್ಯ ಅಂಗಡಡಿಗಳು ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಅಂತಹ ಅಂಗಡಿಗಳಿಗೆ ಸಾಂಕ್ರಾಮಿಕ ಕಾಯ್ದೆಯನ್ವಯ ದಂಡ ಹಾಕಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಕಾರ್ಯಾಚರಣೆ ತೀವ್ರಗೊಳಿಸಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ.ಎಂ. ಅವರು ಸೂಚಿಸಿದರು.
ಕೋವಿಡ್ ಸೋಂಕು ಉಲ್ಬಣಗೊಂಡಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ, ಗುತ್ತಿಗೆ ಸಿಬ್ಬಂದಿ ಸೇವೆ ಪಡೆಯುವುದು ಸೇರಿದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೊಳ ಅವರು ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರಿಗೆ ನಿರ್ದೇಶನ ನೀಡಿದರು.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ: ಕೇಂದ್ರ ಸರ್ಕಾರವು ಇದೇ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ನೀಡಲು ನಿರ್ದೇಶನ ನೀಡಿರುವುದರಿಂದ ಜಿಲ್ಲೆಯಾದ್ಯಂತ ಕೋವಿಡ್ ಲಸಿಕೆ ನೀಡಲು ಹೆಚ್ಚಿನ ಶ್ರಮ ವಹಿಸಬೇಕು. ಇದೂವರೆಗೆ ಪ್ರಥಮ ಡೋಸ್ ಪಡೆಯದ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಪ್ರಥಮ ಡೋಸ್ ಹಾಗೂ ಪ್ರಥಮ ಡೋಸ್ ಪಡೆದಿದ್ದಲ್ಲಿ ಎರಡನೇ ಡೋಸ್ ನೀಡಬೇಕು. ಒಟ್ಟಾರೆ ಲಸಿಕೆ ಪಡೆಯಲು ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಗಡಿಯಲ್ಲಿ ಗಸ್ತು ಇರಲಿ: ಮಹಾರಾಷ್ಟ್ರದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗಿರುವುದರಿಂದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಹಿರೋಳಿ, ಖಜೂರಿ, ನಿಂಬಾಳ, ಬಳ್ಳೂರ್ಗಿ ಹಾಗೂ ಮಾಶಾಳದಲ್ಲಿ ಸ್ಥಾಪಿಸಲಾಗಿರುವ 5 ಚೆಕ್ ಪೋಸ್ಟ್‍ಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ತಪಾಸಣೆ ಮಾಡಿಯೆ ಒಳಗಡೆ ಬಿಡಬೇಕು ಎಂದು ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್ ಅವರಿಗೆ ಸೂಚಿಸಿದರು.
ಸೋಂಕಿತರು ಹೊರಬಂದರೆ ಸಿ.ಸಿ.ಸೆಂಟರ್‍ಗೆ ಶಿಫ್ಟ್: ಪಾಸಿಟಿವ್ ಆಗಿ ಹೋಂ ಐಸೋಲೇಷನ್‍ನಲ್ಲಿದ್ದವರು ಮನೆಯಿಂದ ಹೊರಗೆ ಬಂದು ತಿರುಗಾಡಿದ್ದು ಕಂಡುಬಂದಲ್ಲಿ ಅವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಶಿಫ್ಟ್ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ಜಿಲ್ಲೆಯಲ್ಲಿ ಮಾರ್ಚ್-2021ರ ಮೊದಲನೇ ವಾರದಲ್ಲಿ ಶೇ.1.28 ರಷ್ಟು ಕೋವಿಡ್ ಪಾಸಿಟಿವಿಟಿ ಪ್ರಮಾಣವಿದ್ದರೆ ನಾಲ್ಕನೇ ವಾರದಲ್ಲಿ ಇದರ ಪ್ರಮಾಣ ಶೇ.2.2ಕ್ಕೆ ಹೆಚ್ಚಳಗೊಂಡಿದೆ. ಕಳೆದ ಒಂದು ವಾರದಲ್ಲಿ 926 ಕೋವಿಡ್ ಪಾಸಿಟಿವ್ ವರದಿಯಾಗಿವೆ.
ಕಳೆದ ಸೋಮವಾರವೇ ಜಿಲ್ಲೆಗೆ 30 ಸಾವಿರ ಕೋವಿಶೀಲ್ಡ್ ಡೋಸ್ ಲಸಿಕೆ ಬಂದಿದೆ. ಇದಕ್ಕೂ ಮೊದಲು ಜಿಲ್ಲೆಗೆ 90510 ಕೋವಿಶೀಲ್ಡ್ ಮತ್ತು 11200 ಕೋವ್ಯಾಕ್ಸಿನ್ ಡೋಸ್ ಲಸಿಕೆ ಬಂದಿದ್ದು, ಕ್ರಮವಾಗಿ 77291 ಮತ್ತು 9132 ಡೋಸ್ ಬಳಕೆಯಾಗಿದ್ದು, ಲಸಿಕೆಯ ಕೊರತೆ ಇಲ್ಲ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 45-59 ಮತ್ತು 60 ಮೇಲ್ಪಟ್ಟ ನಾಗರಿಕರು ಒಳಗೊಂಡಂತೆ 73485 ಜನರಿಗೆ ಮೊದಲನೇ ಡೋಸ್ ಮತ್ತು 12458 ಜನರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದರು.
ಜಿಲ್ಲೆಯಾದ್ಯಂತ ಮಾಸ್ಕ್ ಧರಿಸುವಿಕೆ ಮತು ಸಾಮಾಜಿಕ ಅಂತರ ಪರಿಪಾಲನೆಗೆ ಜಾಗೃತಿ ಕಾರ್ಯಕ್ರಮಗಳು ನಿರಂತರ ಸಾಗಿದ್ದು, ಕಳೆದ ಒಂದು ವಾರದಲ್ಲಿ ಮಾಸ್ಕ್ ಧರಿಸದ 4562 ಜನರಿಗೆ 6.08 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೋವಿಡ್ 2ನೇ ಅಲೆ ಉಲ್ಬಣಗೊಂಡಲ್ಲಿ ಇದರ ನಿಯಂತ್ರಣಕ್ಕೆ ಕೋವಿಡ್ ಕೇರ್ ಸೆಂಟರ್ ತೆರೆಯಲು ವಸತಿ ನಿಲಯಗಳನ್ನು ಗುರುತಿಸಿದೆ ಎಂದರು.
ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಷಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ದಿಲೀಶ್ ಸಾಸಿ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಡಿ.ಹೆಚ್.ಓ. ಡಾ.ರಾಜಶೇಖರ ಮಾಲಿ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.