ಕೋವಿಡ್ ಮತ್ತಷ್ಟು ಹೆಚ್ಚಳ ತಜ್ಞರ ಎಚ್ಚರಿಕೆ

ನವದೆಹಲಿ, ಮಾ. ೨೧: ದೇಶಾದ್ಯಂತ ಕೋವಿಡ್-೧೯ ಎರಡನೇ ತೀವ್ರ ಆತಂಕ ಸೃಷ್ಟಿಸಿದೆ. ಕೋವಿಡ್ ಪ್ರಕರಣಗಳು ಶೇ.೧.೩ ರಷ್ಟು ಹೆಚ್ಚಿದ್ದು, ಮುಂದಿನ ವಾರಗಳಲ್ಲಿ ಕೋವಿಡ್ ಎರಡನೇ ಅಲೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಕೇರಳ ಸೇರಿದಂತೆ ದೇಶದ ೧೭ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಲಿವೆ. ಅದರಲ್ಲೂ ಅತಿದೊಡ್ಡ ರಾಜ್ಯಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮತ್ತಷ್ಟು ಪ್ರಕರಣಗಳು ಹೆಚ್ಚಾಗಲಿದ್ದು, ಮಹಾನಗರಗಳಲ್ಲೂ ಉಲ್ಬಣಗೊಳ್ಳಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೪೦,೯೫೩ ಹೊಸ ಕೋವಿಡ್-೧೯ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ೨೫,೬೮೧ ಪ್ರಕರಣಗಳು ವರದಿಯಾಗಿವೆ. ಸತತ ಮೂರನೇ ದಿನವೂ ಪಂಜಾಬ್ ೨ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಆದರೆ ತಮಿಳುನಾಡು ಮತ್ತು ಮಧ್ಯಪ್ರದೇಶ ದಲ್ಲಿ ೧ ಸಾವಿರ ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಮೊದಲ ಬಾರಿಗೆ. ಕರ್ನಾಟಕ ಮತ್ತು ಗುಜರಾತ್‌ನಲ್ಲೂ ಕಳೆದ ಕೆಲವು ದಿನಗಳಿಂದ ಪ್ರತಿದಿನ ೧ ಸಾವಿರ ಹೆಚ್ಚು ಪ್ರಕರಣಗಳು ವರದಿ ಆಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕಳೆದ ೨೪ ಗಂಟೆಗಳಲ್ಲಿ ೧೮೮ ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ೭೦ ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ ಪಂಜಾಬಿನಲ್ಲಿ ೩೮ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ಈವರೆಗೆ ೪.೩೬ ಕೋಟಿಗೂ ಹೆಚ್ಚು ಲಸಿಕೆಯ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.