ಕೋವಿಡ್ ಮಣಿಸಿದ ಹಣಕುಣಿ ಗ್ರಾಮಸ್ಥರು

ಬೀದರ, ಮೇ 28; ಮಹಾಮಾರಿ ಕೊರೊನಾದಿಂದ ತತ್ತರಿಸಿದ ಗ್ರಾಮವನ್ನು ಸೀಲ್‌ಡೌನ್ ಮಾಡುವ ಮೂಲಕ ಗ್ರಾಮಸ್ಥರು ಕೋವಿಡ್ ಗೆದ್ದಿದ್ದಾರೆ. ಚಿಟ್ಟಗುಪ್ಪಾ ತಾಲೂಕಿನ ಹಣಕುಣಿ ಗ್ರಾಮದ ಜನರು ಇತರರಿಗೆ ಮಾದರಿಯಾಗಿದ್ದಾರೆ.

ಕೋವಿಡ್ ಪ್ರಕರಣ ಹೆಚ್ಚಳದ ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಾರದ ಹಿಂದೆ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿತ್ತು. 50ಕ್ಕೂ ಅಧಿಕ ಕೋವಿಡ್ ಸೋಂಕು ಪ್ರಕರಣ ಹಾಗೂ 5ಕ್ಕೂ ಅಧಿಕ ಕೋವಿಡ್ ಸೋಂಕಿತರು ಗ್ರಾಮದಲ್ಲಿ ಸಾವನ್ನಪ್ಪಿದ್ದರು.

ಹಣಕುಣಿ ಗ್ರಾಮಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಕೋವಿಡ್ ಸಂಬಂಧಿತ ನೋಡಲ್ ಅಧಿಕಾರಿಗಳು ಭೇಟಿ ನೀಡಿದ್ದರು.

ಸ್ಥಳೀಯ ಶಾಸಕ ರಾಜಶೇಖರ ಬಿ. ಪಾಟೀಲ ಸಹ ಗ್ರಾಮಕ್ಕೆ ಭೇಟಿ ನೀಡಿ, ಪ್ರತಿಯೊಬ್ಬರು ವಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದ್ದರು.

ಕೋವಿಡ್ ಕಾರಣದಿಂದಾಗಿ ಗ್ರಾಮದಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಬಳಿಕ ಗ್ರಾಮದ ಜನ ಸ್ವಯಂ ಪ್ರೇರಣೆಯಿಂದ ವ್ಯಾಕ್ಸಿನ್ ತೆಗೆದುಕೊಳ್ಳುವುದು ಮಾತ್ರವಲ್ಲದೇ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಂಚರಿಸುತ್ತಿದ್ದಾರೆ. ಗ್ರಾಮಸ್ಥರು ಜಾಗೃತರಾಗಿದ್ದಾರೆ.

ಈ ಕುರಿತು ಮಾತನಾಡಿದ ಗ್ರಾಮದ ಸ್ನಾತ್ತಕೋತ್ತರ ಪದವೀಧರ ಯುವಕ ಸುರೇಂದ್ರನಾಥ ಹುಡಗೀಕರ್, “ಕೊರೊನಾ ಅಬ್ಬರಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. 15ಕ್ಕೂ ಹೆಚ್ಚಿನ ಜನ ಸೋಂಕಿನ ಅಟ್ಟಹಾಸದಿಂದ ಸಾವಿಗೀಡಾಗಿದ್ದರು” ಎಂದರು.

“ಹಲವಾರು ಜನರಿಗೆ ಸೋಂಕು ತಗುಲಿದಾಗ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಿ ಎಲ್ಲರೂ ನಿಯಮಗಳನ್ನು ತಪ್ಪದೆ ಪಾಲಿಸಲು ಮುಂದಾದರು. ಈಗ ಕೋವಿಡ್ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ” ಎಂದು ಹೇಳಿದ್ದಾರೆ.