ಕೋವಿಡ್ ಭೀತಿ: ಸಂಜೆ ಬದಲು ಬೆಳಿಗ್ಗೆಯೇ ಎಳೆದ ಶರಣಬಸವೇಶ್ವರರ ಉಚ್ಛಾಯಿ

ಕಲಬುರಗಿ:ಏ.01:ಮಹಾಮಾರಿ ಕೋವಿಡ್-19 ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಲ್ಲ ರೀತಿಯ ಜಾತ್ರೆ, ಉತ್ಸವಗಳನ್ನು ನಿಷೇಧಿಸಿದ್ದು, ಅದೇ ರೀತಿ ಶ್ರೀ ಶರಣಬಸವೇಶ್ವರ್ ಮಹಾದಾಸೋಹ ಸಂಸ್ಥಾನವೂ ಸಹ ಈ ಬಾರಿಯೂ ಶ್ರೀ ಶರಣಬಸವೇಶ್ವರರ ರಥೋತ್ಸವವನ್ನು ಅತ್ಯಂತ ಸರಳ ಹಾಗೂ ಸಾಂಪ್ರಾದಾಯಿಕ ರೀತಿಯಲ್ಲಿ ಹಮ್ಮಿಕೊಂಡಿದ್ದು, ಭಕ್ತರು ಮನೆಯಲ್ಲಿದ್ದುಕೊಂಡೇ ಪ್ರಾರ್ಥಿಸಲು ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಅವರು ಕೋರಿದ್ದು, ಆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನೆರವೇರಬೇಕಿದ್ದ ಉಚ್ಛಾಯಿಯು ಬೆಳಿಗ್ಗೆಯೇ ಸಂಸ್ಥಾನದ ಪರಿವಾರದ ಸಮಕ್ಷಮದಲ್ಲಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಎಳೆಯಿತು.
ಕೆಲವೇ ಕೆಲವು ಭಕ್ತರು ಉಚ್ಛಾಯಿಯನ್ನು ಎಳೆದರು. ಎಲ್ಲಿಯೂ ನೂಕು, ನುಗ್ಗಲು, ತಳ್ಳಾಟ, ನೂಕಾಟ ಮುಂತಾದವು ಕಂಡುಬರಲಿಲ್ಲ. ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ, ಮಾತೋಶ್ರೀ ದ್ರಾಕ್ಷಾಯಣಿ ಅವರೂ ಸೇರಿದಂತೆ ಶರಣಬಸವೇಶ್ವರ್ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ನಿಷ್ಠಿ, ಕುಲಸಚಿವ (ಮೌಲ್ಯಮಾಪನ) ಲಿಂಗರಾಜ್ ಶಾಸ್ತ್ರಿ, ಡಾ. ಅನಿಲಕುಮಾರ್ ಬಿಡವೆ, ಬಸವರಾಜ್ ದೇಶಮುಖ್ ಸೇರಿದಂತೆ ಪರಿವಾರದವರೆಲ್ಲರೂ ಉಚ್ಛಾಯಿ ಎಳೆಯುವಾಗ ಉಪಸ್ಥಿತರಿದ್ದರು.