ಕೋವಿಡ್ ಭೀತಿ: ಪಾಲಿಕೆಯಲ್ಲಿ ಐರಿಸ್ ಸ್ಕ್ಯಾನಿಂಗ್ ವ್ಯವಸ್ಥೆ ಜಾರಿ

ಕಲಬುರಗಿ:ಏ.7:ಮಹಾಮಾರಿ ಕೋವಿಡ್-19 ಎರಡನೇ ಅಲೆಯ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯು ಐರಿಸ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಪೌರ ಕಾರ್ಮಿಕರು ಕೋವಿಡ್ ಭೀತಿಯಿಂದ ನಲುಗಿ ಹೋಗಿದ್ದು, ಅವರ ಹಿತವನ್ನು ಗಮನಿಸಿ ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯು ನೂತನ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಈ ಮೊದಲು ಪೌರ ಕಾರ್ಮಿಕರು ತಮ್ಮ ಹಾಜರಾತಿಯನ್ನು ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ತೋರಿಸುತ್ತಿದ್ದರು. ಬೆರಳಚ್ಚಿನಿಂದ ಕೋವಿಡ್ ಭೀತಿ ಹರಡುವುದೆಂಬ ಕಾರಣದಿಂದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಅದಕ್ಕೆ ಪರ್ಯಾಯವಾಗಿ ಕಣ್ಣಿನ ದೃಷ್ಟಿ ಗುರುತಿಸುವಿಕೆ (ಐರಿಸ್ ಸ್ಕ್ಯಾನಿಂಗ್) ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಪೌರ ಕಾರ್ಮಿಕರ ಹಾಜರಾತಿಯೊಂದಿಗೆ ಅವರಲ್ಲಿರುವ ಸೋಂಕು ಗುರುತಿಸಲು ಸಹ ಇದು ಸಹಕಾರಿಯಾಗಲಿದೆ.
ಬಯೋಮೆಟ್ರಿಕ್ ಹಾಜರಾತಿ ಕೊಡುವಾಗ ಯಂತ್ರದ ಮೇಲೆ ಬೆರಳಿನ ಸ್ಪರ್ಶ ಆಗಿಯೇ ಆಗುತ್ತದೆ. ಸ್ಪರ್ಶ ಮಾಡದೇ ಹಾಜರಿಯೇ ಬೀಳುವುದಿಲ್ಲ. ಈ ವ್ಯವಸ್ಥೆಯಿಂದ ಕೊರೋನಾ ಹರಡುವ ಸಂಭವ ಹೆಚ್ಚು. ಇದೇ ಕಾರಣಕ್ಕೆ ಬಯೋಮೆಟ್ರಿಕ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
ಐರಿಸ್ ಸ್ಕ್ಯಾನಿಂಗ್ ವ್ಯವಸ್ಥೆಯಿಂದ ಯಾವುದೇ ರೀತಿಯಲ್ಲಿ ಭಯ ಇಲ್ಲ. ಬದಲಾಗಿ ಆರೋಗ್ಯದ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. ಐರಿಸ್ ಸ್ಕ್ಯಾನರ್ ಎದುರು ನಿಂತರೆ ಸಾಕು ಕಣ್ಣಿನ ಗೆರೆಗಳನ್ನು ಗುರುತಿಸುತ್ತದೆ. ಯಂತ್ರಕ್ಕೆ ಶಾರೀರಿಕ ಸಂಪರ್ಕದ ಅವಶ್ಯಕತೆಯೂ ಬೀಳದು. ಯಾವುದೇ ಸ್ಪರ್ಶ ಇಲ್ಲದೇ ಹಾಜರಾತಿ ಸಹ ನೀಡಬಹುದಾಗಿದೆ. ದೂರಿಂದಲೇ ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ನೌಕರರ ಹಾಜರಾತಿ ಸಹ ದಾಖಲಾಗುತ್ತದೆ. ಇದು ಹಾಜರಿ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ.
ಪೌರ ಕಾರ್ಮಿಕರ ಹಿತದೃಷ್ಟಿಯಿಂದಲೇ ಐರಿಸ್ ಯಂತ್ರಗಳನ್ನು ಅಳವಡಿಕೆ ಮಾಡಲಾಗಿದೆ. ಪೌರ ಕಾರ್ಮಿಕರ ಹಾಜರಾತಿಯಿಂದ ವಂಚಿತರಾಗಬಾರದು ಜೊತೆಗೆ ಮೈಗಳ್ಳ ಕಾರ್ಮಿಕರು ಕೂಡ ಕೆಲಸ ಮಾಡದೇ ಪಾಲಿಕೆಗೆ ಮೋಸ ಮಾಡಬಾರದು ಎನ್ನುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ ಎಂದು ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಹೇಳಿದ್ದಾರೆ.
ಬಯೋಮೆಟ್ರಿಕ್ ಸಂದರ್ಭದಲ್ಲಿ ಬೆರಳಚ್ಚು ನೀಡಬೇಕಿತ್ತು. ಆದಾಗ್ಯೂ, ಕೈಗಳಲ್ಲಿನ ಗೆರೆಗಳನ್ನು ಸರಿಯಾಗಿ ಗುರುತಿಸದೇ ಇದ್ದಿದ್ದರಿಂದ ಕೆಲಸ ಮಾಡಿದರು. ಹಾಜರಾತಿ ಬೀಳುತ್ತಿರಲಿಲ್ಲ. ಜೊತೆಗೆ ಕೋವಿಡ್ ಭಯವೂ ಇತ್ತು. ಇದೀಗ ಐರಿಸ್ ಹಾಜರಾತಿಯಿಂದ ಕೋವಿಡ್ ಭಯವಿಲ್ಲ. ಜೊತೆಗೆ ಹಾಜರಾತಿ ಸಮಸ್ಯೆ ಸಹ ಇಲ್ಲ ಎಂದು ಪೌರ ಕಾರ್ಮಿಕ ಮಹಿಳೆ ಬಸಮ್ಮ ಅವರು ತಿಳಿಸಿದ್ದಾರೆ.