ಕೋವಿಡ್ ಭೀತಿ: ನಗರದಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್, ಜನಜೀವನ ಅಸ್ತವ್ಯಸ್ಥ

ಕಲಬುರಗಿ.ಏ.23:ಸರ್ಕಾರದ ಹೊಸ ಮಾರ್ಗಸೂಚಿಯಂತೆ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಅಗತ್ಯ ವಸ್ತುಗಳ ಅಂಗಡಿ, ಮುಂಗಟ್ಟುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ, ಮುಂಗಟ್ಟುಗಳನ್ನು ನಗರದಲ್ಲಿ ಪೋಲಿಸರು ಬಂದ್ ಮಾಡಿಸಿದ್ದು, ಇದರಿಂದಾಗಿ ಜನನಿಬಿಡ ಸ್ಥಳಗಳಲ್ಲಿ ಜನರಿಲ್ಲದೇ ಒಂದು ಕಡೆ ಬಿಕೋ ಎನ್ನುತ್ತಿದ್ದರೆ, ಇನ್ನೊಂದೆಡೆ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದರಿಂದ ಸಿಬ್ಬಂದಿಗಳು ಉದ್ಯೋಗ ಇಲ್ಲದೇ ನಿರಾಶರಾಗಿ ಮನೆಗೆ ಮರಳುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ.
ದಿಢೀರ್ ಹೊಸ ಮಾರ್ಗಸೂಚಿ ಜಾರಿ ಮಾಡಿದ್ದರಿಂದ ವರ್ತಕರು ಗೊಂದಲಕ್ಕೆ ಒಳಗಾಗಿದ್ದರು. ವಾಣಿಜ್ಯ ವ್ಯವಹಾರ ನಡೆಸುವ ಅಂಗಡಿಗಳನ್ನು ಬಂದ್ ಮಾಡಿಸಲು ಒಂದು ರೀತಿಯಿಂದ ಪೋಲಿಸರು ಹರಸಾಹಸಪಟ್ಟರು. ಪೋಲಿಸರು ಎಷ್ಟೇ ಹೇಳಿದರೂ ಸಹ ನಗರದ ಸೂಪರ್ ಮಾರ್ಕೆಟ್‍ನಲ್ಲಿ ಅಂಗಡಿಗಳನ್ನು ಬಂದ ಮಾಡಲು ಹಿಂದೇಟು ಹಾಕಿದರು.
ಆದರೂ ಸಹ ಪೋಲಿಸರು ವರ್ತಕರಿಗೆ ತಿಳಿಹೇಳಿ ಅಂಗಡಿಗಳನ್ನು ಬಂದ್ ಮಾಡಿಸಿದರು. ಸೂಪರ್ ಮಾರ್ಕೆಟ್, ಗೋಲ್ಡ್ ಮಾರ್ಕೆಟ್, ಚಪ್ಪಲಿ ಬಜಾರ್, ಬಾಂಡೆ ಬಜಾರ್‍ಗಳಲ್ಲಿ ಅಂಗಡಿಗಳನ್ನು ಬಂದ್ ಮಾಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ವರ್ತಕರು ಇದ್ದರೂ ಸಹ ಪೋಲಿಸರು ಬಂದ್ ಮಾಡಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹಿಡಿದು ರಾಷ್ಟ್ರಪತಿ ಚೌಕ್, ಹಳೆಯ ಜೇವರ್ಗಿ ಕ್ರಾಸ್, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ವೃತ್ತ, ಕೆಬಿಎನ್ ಆಸ್ಪತ್ರೆ, ಅನ್ನಪೂರ್ಣ ಕ್ರಾಸ್, ಜಗತ್ ಸರ್ಕಲ್, ಸೂಪರ್ ಮಾರ್ಕೆಟ್, ನೆಹರೂ ಗಂಜ್, ಹುಮ್ನಾಬಾದ್ ಬೇಸ್, ರಾಮಮಂದಿರ ರಸ್ತೆ, ಖರ್ಗೆ ಪೆಟ್ರೋಲ್ ಪಂಪ್ ರಸ್ತೆ, ಅಫಜಲಪೂರ್ ರಸ್ತೆ, ಆಳಂದ್ ನಾಕಾ, ಶಹಾಬಜಾರ್ ನಾಕಾ ಸೇರಿದಂತೆ ವಿವಿಧೆಡೆ ಅಂಗಡಿ, ಮುಂಗಟ್ಟುಗಳು ಬಂದ್ ಮಾಡಲಾಗಿತ್ತು.
ಇದರಿಂದಾಗಿ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ತೀವ್ರ ನಿರಾಶರಾಗಿ ಸ್ವಲ್ಪ ಹೊತ್ತು ತಮ್ಮ, ತಮ್ಮ ಅಂಗಡಿ, ಮುಂಗಟ್ಟುಗಳ ಮುಂದೆ ಕುಳಿತು ತೆರಳಿದರು. ಒಂದು ರೀತಿಯಲ್ಲಿ ಅರ್ಧ ಲಾಕ್‍ಡೌನ್ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗುತ್ತಿತ್ತು.
ರಾತ್ರಿ ಕಫ್ರ್ಯೂ ಜಾರಿಯಲ್ಲಿ ಇರುವುದರಿಂದ ಬೆಳಿಗ್ಗೆ ನಗರದಲ್ಲಿ ಎಂದಿನಂತೆ ವಾಹನಗಳ ಸಂಚಾರ ಇತ್ತು. ಎಲ್ಲಿಯೂ ಪೋಲಿಸರು ಅಡ್ಡಿಪಡಿಸಲಿಲ್ಲ. ಹೀಗಾಗಿ ರಸ್ತೆ ಮೇಲೆ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗಲಿಲ್ಲ.
ಕಣ್ಣಿ ಮಾರುಕಟ್ಟೆ: ಕಣ್ಣಿ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯಿತು. ತರಕಾರಿ ಮಾರಾಟಕ್ಕೆ ಯಾವುದೇ ರೀತಿಯಲ್ಲಿ ನಿಷೇಧ ವಿಧಿಸದೇ ಇರುವುದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿತ್ತು. ಆದಾಗ್ಯೂ, ಕಣ್ಣಿ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸುವುದು ಎಲ್ಲಿಯೂ ಕಂಡುಬರಲಿಲ್ಲ.