ಕೋವಿಡ್ ಭೀತಿ: ಖಾಸಗಿ ಆಸ್ಪತ್ರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಂಗ್ರೆಸ್ ಆಗ್ರಹ

ಕಲಬುರಗಿ.ಏ.23:ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರವು ಖಾಸಗಿ ಅಸ್ಪತ್ರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಒತ್ತಾಯಿಸಿದ್ದಾರೆ.
ಕೊರೋನಾ ಮಹಾಮಾರಿಯ ಎರಡನೇ ಅಲೇ ದಿನದಿಂದ ದಿನಕ್ಕೆ ಶರವೇಗದಲ್ಲಿ ಹೆಚ್ಚುತ್ತಿದ್ದು ಹೆಚ್ಚಿನ ರೀತಿಯಲ್ಲಿ ಅನೇಕ ಜನರು ಮರಣ ಹೊಂದುತ್ತಿದ್ದು ಜಿಲ್ಲೆಯಲ್ಲಿ ಕೊರೋನಾ ಹೆಚ್ಚಿನ ರೀತಿಯಲ್ಲಿ ಹರಡುತ್ತಿದ್ದು ಇತ್ತಕಡೆ ಜಿಲ್ಲಾ ಉಸ್ತುವಾರಿ ಸಚಿವರು ಸುಳಿಯುತ್ತಿಲ್ಲ ಹಾಗೂ ಸರ್ಕಾರ ಎಚ್ಚೆತ್ತು ನೋಡುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ ತಡೆಗಟ್ಟುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲಗೊಂಡಿದ್ದು, ರೆಮಡಿಸಿವಿಯರ್ ಔಷದ ಎಲ್ಲರಿಗೂ ದೊರೆಯದೇ ದುಬಾರಿ ಹಣಕ್ಕೆ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಮತ್ತು ಬೆಡ್ ಕೊರತೆ ಇದೆ ಎಂದು ಸ್ವತ: ಮುಖ್ಯಮಂತ್ರಿಗಳೇ ಹೇಳಿದ್ದು ಪರಿಸ್ಥಿತಿಯನ್ನು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಸರ್ಕಾರ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊರೋನಾ ವiಹಾಮಾರಿಯಿಂದ ತತ್ತರಿಸಿರುವ ಎಲ್ಲ ಬಡ ಕುಟುಂಬಗಳ ಖಾತೆಗೆ 10,000ರೂ.ಗಳು ಮತ್ತು 15 ಕೆಜಿ ಅಕ್ಕಿ ಉಚಿತವಾಗಿ ವಿತರಿಸಬೇಕು. ಬಡವರಿಗಾಗಿ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನರ ಸಾವುಗಳನ್ನು ಗಂಭೀರವಾಗಿ ಪರಿಗಣಿಸದೇ ವಿಕೃತಭಾವ ಪ್ರಧಾನಿ ನರೇಂದ್ರ ಮೋದಿಯವರಿಗಿದೆ ಎಂಬುದು ತಿಳಿಸಿಕೊಡುತ್ತದೆ. ಯಾರೊಬ್ಬರು ಹಸಿವಿನಿಂದ ನರಳಿ ಸಾಯದಂತೆ ಸರ್ಕಾರ ನಿಗಾ ವಹಿಸಬೇಕು. ರೈತರ ಸಾಲ ಮನ್ನಾ ಅಥವಾ ಬಡ್ಡಿ ಮನ್ನಾ ಸರ್ಕಾರ ಕೂಡಲೇ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಡಿಜೇಲ್, ಪೆಟ್ರೋಲ್, ಅಡುಗೆ ಅನಿಲ ಮತ್ತು ರಸಗೊಬ್ಬರ ಬೆಲೆಗಳನ್ನು ಸರ್ಕಾರ ಕಡಿತಗೊಳಿಸಬೇಕು. ಅಡುಗೆ ಅನಿಲ ಮತ್ತು ರಸಗೊಬ್ಬರ ಮೇಲೆ ಕಡಿತಗೊಳಿಸಿರುವ ಸಬ್ಸಿಡಿಯನ್ನು ಸರ್ಕಾರ ಕೂಡಲೇ ಸಬ್ಸಿಡಿ ನೀಡಿ ದರ ಕಡಿಮೆಗೊಳಿಸಬೇಕು. ಇಂದಿರಾ ಕ್ಯಾಂಟಿನ್‍ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಸಿದವರ ಹೊಟ್ಟೆಗೆ ಅನ್ನ ನೀಡಬೇಕು. ಬಿಪಿಎಲ್ ಕಾರ್ಡುದಾರರಿಗೆ ನೀಡುವ ಅಕ್ಕಿಯನ್ನು 2 ಕೆಜಿಗೆ ಕಡಿತಗೊಳಿಸಿರುವ ಸರ್ಕಾರ ಮೊದಲಿನಂತೆ ನೀಡಿ ಹೆಚ್ಚಿಗೆ ತೊಗರಿಬೇಳೆ, ಉಂಬಎಣ್ಣೆ ಇನ್ನೀತರ ಆಹಾರ ಪದಾರ್ಥಗಳು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೊರೋನಾ ಮಹಾಮಾರಿಯಲ್ಲಿ ಈ ಎಲ್ಲ ರೀತಿಯ ತೊಂದರೆ ನೀಡುತ್ತಿರುವ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿ ಖಂಡನಾರ್ಹ. ಕೂಡಲೇ ಇನ್ನೂ ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಜನರ ಸಂರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.