ಕೋವಿಡ್ ಭೀತಿ:ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಡಿ.೨೧:ರಾಜ್ಯದಲ್ಲಿ ಜನವರಿ ತಿಂಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ.
ರಾಜ್ಯದ ಕೋವಿಡ್ ೧೯ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪಾಲ್ಗೊಂಡಿದ್ದ ತಜ್ಞರು ಜನವರಿಯಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು, ಫೆಬ್ರವರಿಯಿಂದ ಸೋಂಕು ಇಳಿಕೆಯಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಸದ್ಯ ಯಾರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಇಲ್ಲ ಎಂದು ತಜ್ಞರು ಹೇಳಿದ್ದಾರೆ.
ಜನವರಿಯಲ್ಲಿ ಸೋಂಕು ಹೆಚ್ಚಾಗುವ ತಜ್ಞರ ಮಾಹಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೋಂಕು ತಡೆಗೆ ಏನೆಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ಕೋವಿಡ್ ಎಲ್ಲ ರೀತಿಯಲ್ಲಿ ಸಜ್ಜಾಗುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಆದ ತಪ್ಪುಗಳು ಮರುಕಳಿಸಬಾರದು, ಮುನ್ನೆಚ್ಚೆರಿಕೆ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಕಾಯುತ್ತ ಕೂರುವ ಅಗತ್ಯವಿಲ್ಲ ನಾವೆ ಎಲ್ಲ ಮುನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ರಾಜ್ಯದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಳ ಮಾಡುವಂತೆಯೂ ಸೂಚನೆ ನೀಡಿದ ಮುಖ್ಯಮಂತ್ರಿಗಳು, ಕೊರೊನಾ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ದರ ನಿಗದಿ ಮಾಡುವಂತೆಯೂ ಸೂಚನೆ ನೀಡಿದರು.
ರಾಜ್ಯದಲ್ಲಿ ಕೋವಿಡ್ ಎದುರಿಸಲು ಆರೋಗ್ಯ ಇಲಾಖೆ ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆಯೂ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು ಆಮ್ಲಜನಕ, ಐಸಿಯು ಬೆಡ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಯಾವುದೇ ಕೊರೊನಾ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಹಾಗೆಯೇ ತುರ್ತಾಗಿ ಏನೆಲ್ಲ ಔಷಧಿ ಉಪಕರಣಗಳ ಖರೀದಿ ಮಾಡಬೇಕೊ ಅದನ್ನು ಖರೀದಿ ಮಾಡಿ ಎಂದು ಸಭೆಯಲ್ಲಿ ಹೇಳಿದರು.
ನೆರೆಯ ಕೇರಳ, ಗೋವಾ, ಮಹಾರಾಷ್ಟ್ರ ಸೋಂಕು ವ್ಯಾಪಕವಾಗಿರುವುದರಿಂದ ಗಡಿಯಲ್ಲೂ ಕಟ್ಟೆಚ್ಚರ ವಹಿಸಿ ಕೊರೊನಾ ತಪಾಸಣೆ ಮಾಡುವಂತೆಯೂ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ನಿನ್ನೆ ಸೋಂಕು ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಹಾಗಾಗಿ ರಾಜಧಾನಿಯಲ್ಲೂ ಎಚ್ಚರ ವಹಿಸಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು. ಇಂದಿನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳಾದ ದಿನೇಶ್ ಗುಂಡೂರಾವ್, ಡಾ ಜಿ ಪರಮೇಶ್ವರ್, ಡಾ. ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಜೀರ್ ಅಹ್ಮದ್ ಸರ್ಕಾರದ ಮುಖ್ಯ ಕಾರ್ಯದಶೀ ಡಾ. ರಜನೀಶ್‌ಗೋಯಲ್, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ ಅತೀಕ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ ಅನಿಲ್‌ಕುಮಾರ್,ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್, ಬಿಬಿಎಂಪಿ ಆಯುಕ್ತ ತುಷಾರ್‌ಗಿರಿನಾಥ್, ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಹಲವು