ಕೋವಿಡ್ ಬಳಿಕ ಹೊಸ ಹೂಡಿಕೆ ಗಣನೀಯ ಹೆಚ್ಚಳ

ನವದೆಹಲಿ,ಜ.9- ದೇಶದಲ್ಲಿ ಕೋವಿಡ್ ಸೋಂಕಿನ ಸಮಸ್ಯೆಯಿಂದ ಹೊರ ಬಂದ ಬಳಿಕ 2022 ರಲ್ಲಿ ಆರ್ಥಿಕತೆ ಬಲಗೊಳ್ಳುತ್ತಿದ್ದಂತೆ ಹೊಸ ಹೂಡಿಕೆ ಪ್ರಸ್ತಾಪಗಳು ಹೆಚ್ಚಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮೂಲಗಳ ಪ್ರಕಾರ ಹೊಸ ಹೂಡಿಕೆಯ ಪ್ರಮಾಣ ಶೇ.71 ರಷ್ಟು ಹೆಚ್ಚಾಗಿವೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಮಾಹಿತಿ ನೀಡಿವೆ.

2022ರ ಸಂಚಿತ ಆಧಾರದ ಮೇಲೆ ಒಟ್ಟು ಹೂಡಿಕೆ ಪ್ರಸ್ತಾವನೆಗಳು 23.6 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2021ರಲ್ಲಿ ಹೂಡಿಕೆ ಪ್ರಮಾಣ 13.8 ಲಕ್ಷ ಕೋಟಿ ರೂಪಾಯಿ ಇದ್ದರೆ 2020 ರಲ್ಲಿ 11.6 ಲಕ್ಷ ಕೋಟಿ ರೂ.ಮೊತ್ತದ ಹೂಡಿಕೆ ಪ್ರಸ್ತಾಪಗಳು ಬಂದಿದ್ದವು ಎಂದು ಅಂಕಿ ಅಂಶಗಳು ಮಾಹಿತಿ ನೀಡಿದೆ,

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ದೇಶದಲ್ಲಿ ಆರ್ಥಿಕ ಬೆಳವಣಿಗೆ ಚೇತರಿಕೆ ಕಂಡಿದ್ದು ಇದರ ಪರಿಣಾಮವಾಗಿ ಹೊಸ ಹೂಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.

ಸಿಎಂಐಇ ಮತ್ತು ಬ್ಯಾಂಕ್ ಆಫ್ ಬರೋಡಾ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 2022 ರಲ್ಲಿ ಮಾಡಿದ ರೂ 23.6 ಲಕ್ಷ ಕೋಟಿ ಘೋಷಣೆಗಳು ಕಳೆದ ಆರು ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.

ಎರಡು ನಿರಾಶಾದಾಯಕ ವರ್ಷಗಳ ನಂತರ ಕೋವಿಡ್ ಸಾಂಕ್ರಾಮಿಕ ಇಡೀ ದೇಶವನ್ನು ತತ್ತರಿಸುವಂತೆ ಮಾಡಿದೆ. ಇದರಿಂದ ದೇಶದ ವಿವಿಧ ವಲಯಗಳು ಆರ್ಥಿಕವಾಗಿ ಕುಸಿತ ಕಂಡಿದ್ದವು.

ಇತ್ತೀಚಿನ ದಿನಗಳಲ್ಲಿ ಭಾರತೀಯ ಉದ್ಯಮ ಹೂಡಿಕೆಯ ಮುಂಭಾಗದಲ್ಲಿ ಆಶಾವಾದದ ಲಕ್ಷಣಗಳನ್ನು ತೋರಿಸುತ್ತಿದೆ. ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಆರ್ಥಿಕತೆಯನ್ನು ಪುನಃ ತೆರೆಯುವುದರೊಂದಿಗೆ 2022 ರ ಕ್ಯಾಲೆಂಡರ್ ವರ್ಷದಲ್ಲಿ ಉದ್ಯಮದ ಹೊಸ ಹೂಡಿಕೆ ಪ್ರಸ್ತಾಪಗಳು ಶೇಕಡಾ 71 ರಷ್ಟು ಏರಿಕೆಯಾಗಿದೆ.

ಭವಿಷ್ಯದ ದಿನಗಳಲ್ಲಿ ಹೊಸ ಹೂಡಿಕೆ ಮತ್ತು ವಿವಿಧ ವಲಯಗಳಲ್ಲಿನ ಆರ್ಥಿಕ ಪ್ರಗತಿ ಗಣನೀಯಾಗಿ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಮಾಹಿತಿ ನೀಡಲಾಗಿದೆ.