ಕೋವಿಡ್ ಬಳಿಕ ಚೊಚ್ಚಲ ವಿದೇಶಿ ಪ್ರಯಾಣಕ್ಕೆ ಸಜ್ಜಾದ ಜಿನ್‌ಪಿಂಗ್!

ಬೀಜಿಂಗ್, ಸೆ.೧೨- ವಿಶ್ವದಲ್ಲೇ ಕೋವಿಡ್-೧೯ ಸೋಂಕು ಮೊತ್ತ ಮೊದಲ ಬಾರಿಗೆ ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ದೇಶಬಿಟ್ಟು ಎಲ್ಲಿಗೂ ತೆರಳದ ಅಲ್ಲಿನ ಅಧ್ಯಕ್ಷ ಕ್ಷೀ ಜಿನ್‌ಪಿಂಗ್ ಇದೀಗ ಇದೇ ಮೊದಲ ಬಾರಿಗೆ ವಿದೇಶ ಪ್ರಯಾಣಕ್ಕೆ ಸಜ್ಜಾಗಿದ್ದಾರೆ. ಸೆಪ್ಟೆಂಬರ್ ೧೪ರಿಂದ ಜಿನ್‌ಪಿಂಗ್ ಅವರು ಎಸ್‌ಸಿಒ ನಡೆಯಲಿರುವ ಉಜ್ಬೇಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಈ ಮೂಲಕ ಬರೊಬ್ಬರಿ ಎರಡೂವರೆ ವರ್ಷದ ಬಳಿಕ ವಿದೇಶಿ ಪ್ರಯಾಣ ಮಾಡಲಿದ್ದಾರೆ.
ವಿಶ್ವದ ಹಲವು ಕಡೆಗಳಲ್ಲಿ ಕೊರೊನಾ ಬಹುತೇಕ ನಿಯಂತ್ರಣಕ್ಕೆ ಬಂದಿದ್ದರೂ ಚೀನಾದಲ್ಲಿ ಈಗಲೂ ಕಠಿಣ ನಿಯಮಗಲು ಚಾಲ್ತಿಯಲ್ಲಿದೆ. ಅಲ್ಲದೆ ಚೀನಾದಲ್ಲಿ ಸೋಂಕು ಈಗಲೇ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಲ್ಲಿನ ಅಧ್ಯಕ್ಷ ಜಿನ್‌ಪಿಂಗ್ ಎಲ್ಲಾ ವಿದೇಶ ಪ್ರವಾಸಗಳನ್ನು ಮೊಟಕುಗೊಳಿಸಿದ್ದರು. ಅದರೆ ಇದೀಗ ಎರಡೂವರೆ ವರ್ಷದ ಬಳಿಕ ಜಿನ್‌ಪಿಂಗ್ ವಿದೇಶಕ್ಕೆ ಹಾರಲು ಸಿದ್ಧರಾಗಿದ್ದಾರೆ. ಮುಂದೆ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ಶಾಂಘಾಯ್ ಸಹಕಾರ ಸಂಸ್ಥೆ (ಎಸ್‌ಸಿಒ) ಮಹಾಸಭೆ ನಡೆಯಲಿದ್ದು, ಇಲ್ಲಿ ರಶ್ಯಾದ ವ್ಲಾದಿಮಿರ್ ಪುತಿನ್, ಭಾರತ ಪ್ರಧಾನಿ ನರೇಂದ್ರ ಮೋದಿ, ಪಾಕ್ ಪ್ರಧಾನಿ ಶಾಬಾಝ್ ಶರೀಫ್ ಸೇರಿದಂತೆ ಹಲವು ರಾಷ್ಟ್ರಗಳ ಪ್ರಮುಖರು ಭಾಗಿಯಾಗಲಿದ್ದಾರೆ. ಮುಖ್ಯವಾಗಿ ಭೇಟಿಯ ವೇಳೆ ಪುತಿನ್ ಹಾಗೂ ಜಿನ್‌ಪಿಂಗ್ ನಡುವೆ ಮಹತ್ವದ ಸಭೆ ನಡೆಯಲಿರುವುದು ಬಹುತೇಕ ಖಚಿತವಾಗಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮೋದಿಯವರ ಜೊತೆ ಭೇಟಿಗೆ ಜಿನ್‌ಪಿಂಗ್ ಭಾರೀ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಆದರೆ ಜಿನ್‌ಪಿಂಗ್ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ ಎಂಬ ಬಗ್ಗೆ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಕಳೆದ ಫೆಬ್ರವರಿಯಲ್ಲಿ ನಡೆದ ಒಲಿಂಪಿಕ್ಸ್ ಉದ್ಘಾಟನಾ ಸಮಯದಲ್ಲಿ ಚೀನಾ ಪ್ರವಾಸ ಮಾಡಿದ್ದ ವೇಳೆ ಜಿನ್‌ಪಿಂಗ್ ಅವರನ್ನು ಪುತಿನ್ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ರಶ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಮತ್ತೊಮ್ಮೆ ಜಿನ್‌ಪಿಂಗ್ ಹಾಗೂ ಪುತಿನ್ ನಡುವೆ ಭೇಟಿ ನಡೆಯಲಿದೆ. ಇನ್ನು ಇತ್ತ ಮೋದಿ ಹಾಗೂ ಪುತಿನ್ ನಡುವೆ ಕೂಡ ಮಹತ್ವದ ಮಾತುಕತೆ ನಡೆಯುವ ಎಲ್ಲಾ ಸಾಧ್ಯತೆ ಇದೆ. ಅದರೆ ಮೋದಿಯ ಜೊತೆ ಭೇಟಿಗಾಗಿ ಹಾತೊರೆಯುತ್ತಿರುವ ಶಾಬಾಝ್ ಶರೀಫ್ ಅವರ ಕಸನು ನನಸಾಗುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗಿದೆ. ಇನ್ನು ಭಾರತ, ರಶ್ಯಾ, ಚೀನಾ, ಪಾಕಿಸ್ತಾನ, ಕಝಕಿಸ್ತಾನ, ಉಜ್ಬೇಕಿಸ್ತಾನ, ತಾಜಿಕಿಸ್ತಾನ ಹಾಗೂ ಕಿರ್ಗಿಸ್ತಾನ ಸೇರಿದಂತೆ ೮ ರಾಷ್ಟ್ರಗಳು ಎಸ್‌ಸಿಒ ಸದಸ್ಯ ರಾಷ್ಟ್ರಗಳಾಗಿದ್ದು, ಇರಾನ್, ಅಫ್ಘಾನಿಸ್ತಾನ, ಬೆಲರೂಸ್ ಹಾಗೂ ಮಂಗೋಲಿಯಾ ವೀಕ್ಷಕ ರಾಷ್ಟ್ರಗಳಾಗಿವೆ. ಅದರೆ ಈ ಬಾರಿ ಇರಾನ್ ಕೂಡ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆಗಳು ಇದೆ ಎನ್ನಲಾಗಿದೆ.