ಕೋವಿಡ್ ಬಗ್ಗೆ ಬುಡಕಟ್ಟು ಸಮುದಾಯದಲ್ಲಿ ಜಾಗೃತಿಗೆ ಸಹಕರಿಸಿ

ಚಾಮರಾಜನಗರ, ಜೂ.06- ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಹಿನ್ನಲೆಯಲ್ಲಿ ಆದಿವಾಸಿ, ಬುಡಕಟ್ಟು ಸಮುದಾಯದ ಜನರು ಕೋವಿಡ್ ಲಸಿಕೆ ಪಡೆಯಬೇಕು. ಸೋಂಕು ಲಕ್ಷಣ ಕಂಡು ಬಂದ ಕೂಡಲೇ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕೋವಿಡ್ ಮುಂಜಾಗ್ರತಾ ಕ್ರಮಗಳಿಗೆ ಜಾಗೃತಿ ಮೂಡಿಸಲು ಸಮುದಾಯಗಳ ಮುಖಂಡರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಿರಿಜನ ಹಾಡಿಗಳಲ್ಲಿ ಕೋವಿಡ್ ಲಸಿಕೆ, ಪರೀಕ್ಷೆ ಮತ್ತು ನಿಯಂತ್ರಣ ಕುರಿತು ಕೈಗೊಳ್ಳಬೇಕಿರುವ ಕ್ರಮಗಳ ಸಂಬಂಧ ನಡೆದ ಜಿಲ್ಲಾ ಗಿರಿಜನ ಮುಖಂಡರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಅರಣ್ಯದಂಚಿನ ಜನತೆ ಬುಡಕಟ್ಟು ವಾಸಿಗಳು ಆರೋಗ್ಯದ ಬಗ್ಗೆ ಕಾಳಜಿ ಹೊಂದಲಾಗಿದೆ. ಕೊರೊನಾ ವ್ಯಾಪಿಸದಂತೆ ತಡೆಯಲು ಜಿಲ್ಲಾ ಹಾಗೂ ತಾಲೂಕು ಆಡಳಿತ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳಿಗೆ ಸ್ಪಂದಿಸಬೇಕು. ಆರಂಭದಲ್ಲಿಯೇ ಸೋಂಕು ತಡೆಗೆ ಮುಂದಾಗುವುದರಿಂದ ಗಂಭೀರ ಹಂತಕ್ಕೆ ತಲುಪುವುದನ್ನು ತಪ್ಪಿಸಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 146 ಹಾಡಿಗಳಿದ್ದು, 143 ಹಾಡಿಗಳು ಕೊರೊನಾ ಮುಕ್ತವಾಗಿವೆ. ಜೀವ ರಕ್ಷಣೆಗೆ ಕೋವಿಡ್ ಲಸಿಕೆಯೇ ಮದ್ದು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಜೀವ ಕಾಪಾಡಲು ಅತ್ಯಂತ ಮುಖ್ಯವಾಗಿರುವ ಲಸಿಕೆ ಪಡೆಯಲು ಗಿರಿಜನರು ಹಿಂದೇಟು ಹಾಕಬಾರದು. ಈ ಬಗ್ಗೆ ಅರಣ್ಯ ವಾಸಿಗಳಲ್ಲಿ ಇರಬಹುದಾದ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಲಸಿಕೆ ಪಡೆಯಲು ವಿಶ್ವಾಸ ಮೂಡಿಸುವ ಕೆಲಸವನ್ನು ಸ್ಥಳೀಯ ಮುಖಂಡರು, ಯಜಮಾನರುಗಳಿಂದ ಆಗಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಲಸಿಕೆ ಪಡೆಯಲು ಆಯಾ ಭಾಗದ ಹಾಡಿ, ಪೋಡುಗಳ ವ್ಯಾಪ್ತಿಯಲ್ಲಿರುವ ಆಶ್ರಮ ಶಾಲೆಗಳಲ್ಲಿಯೇ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಎಂದಿನಂತೆ ಲಸಿಕೆ ನೀಡಲಾಗುತ್ತದೆ. ಜನರ ಅನುಕೂಲಕ್ಕೆ ತಕ್ಕಂತೆ ಕೋವಿಡ್ ಲಸಿಕಾ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಆರಂಭಿಸಲಾಗುತ್ತದೆ. ಗಿರಿಜನರಿಗೆ ಲಸಿಕೆ ನೀಡಲು ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಸೋಂಕು ಹರಡದಿರಲು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಪಟ್ಟಣ, ನಗರ ಪ್ರದೇಶಗಳಿಗೆ ವ್ಯಾಪಾರ ಉದ್ಯೋಗ ನಿಮಿತ್ತ ಸಂಪರ್ಕ ಹೊಂದಿರುವವರು ಕೋವಿಡ್ ಪರೀಕ್ಷೆ ಮಾಡಿಸಬೇಕು. ಸೋಂಕು ಲಕ್ಷಣಗಳು ಇರುವವರಿಗೂ ಸಹ ಕೋವಿಡ್ ಪರೀಕ್ಷೆ ನಡೆಸಬೇಕಿದೆ. ಇದಕ್ಕಾಗಿ ಆಯಾ ಹಾಡಿ, ಪೋಡುಗಳಲ್ಲಿಯೇ ಕೋವಿಡ್ ಪರೀಕ್ಷೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಕಾರ್ಯಕ್ಕೆ ಎಲ್ಲಾ ಮುಖಂಡರು ಅರಿವು ಮೂಡಿಸಬೇಕು ಎಂದರು.
ಕೋವಿಡ್ ಬಗ್ಗೆ ಉದಾಸೀನ ಉಪೇಕ್ಷೆ ಮಾಡುವುದು ಸರಿಯಲ್ಲ. ಜೀವ ರಕ್ಷಣೆಗೆ ತಿಳಿವಳಿಕೆ ಜಾಗೃತಿ ಮೂಡಿಸುವುದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪ್ರತಿ ಹಾಡಿ, ಪೋಡು ಸೇರಿದಂತೆ ಗಿರಿಜನರ ಪ್ರದೇಶಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಬಗ್ಗೆ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವರಿಕೆ ಮಾಡಿ ಕೊಡಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.