ಕೋವಿಡ್ ಬಗ್ಗೆ ಪುನರಪಿ ಎಚ್ಚರಿಕೆಗೆ ಕೋಟಾ ಮನವಿ

ಮಂಗಳೂರು, ಡಿ.೨೫- ಕೋವಿಡ್-೧೯ ಸೋಂಕಿನ ಎರಡನೇ ಅಲೆಯ ರೂಪಾಂತರಗೊಂಡ(ಅಲೆಗಳ) ವೈರಸ್ ಬಗ್ಗೆ ಜನರು ಆತಂಕ ಪಡದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ದ.ಕ.ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಎರಡನೇ ಕೋವಿಡ್ ಅಲೆಯ ಆರಂಭಿಕ ಗುರುತಿಸುವಿಕೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ೭ ದಿನಗಳ ಸರಾಸರಿ ಬೆಳವಣಿಗೆಯ ಸಂಖ್ಯೆಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ರಾಜ್ಯ ಆರೋಗ್ಯ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಲಿದೆ.
ಕೋವಿಡ್-೧೯ ಎರಡನೇ ಅಲೆಯು ೨೦೨೧ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಹರಡುವ ಸಾಧ್ಯತೆಯ ಬಗ್ಗೆ ಈಗಾಗಲೇ ತಜ್ಞರ ಸಮಿತಿ ಸೂಕ್ತ ಮುನ್ನೆಚ್ಚರಿಕೆ ನೀಡಿದೆ.
ಇಲಾಖಾ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ೩,೩೫೦ ಕೋವಿಡ್-೧೯ ಪರೀಕ್ಷೆಗಳನ್ನು ಫೆಬ್ರವರಿ ೨೦೨೧ರವರೆಗೆ ಮುಂದುವರಿಸಲಿದ್ದು, ಇದರಲ್ಲಿ ೨,೯೫೦ ಆರ‍್ಟಿ-ಪಿಸಿಆರ್ ರಾಜ್ಯ ಮಾರ್ಗಸೂಚಿಯಂತೆ, (೧ :೫ Pooಟeಜಟಚಿb ಣesಣ sಣಚಿಣe guiಜeಟiಟಿes) ಪರೀಕ್ಷೆ ನಡೆಸಲಾಗುವುದು.
ಸಾಂಕ್ರಾಮಿಕ ರೋಗದ ತಜ್ಞರ ತಂಡ ಎರಡನೆಯ ಅಲೆಯನ್ನು ಶೀಘ್ರವಾಗಿ ಪತ್ತೆಹಚ್ಚಿ ಗುರುತಿಸಲು ಜಿಲ್ಲಾ ವಾರ್ರೂಂ ಅನ್ನು ರಚಿಸುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೆಶನಾಲಯದ ಆಯುಕ್ತರಿಗೆ ಸೂಚಿಸಲಾಗಿದ್ದು ಅದರ ಪ್ರಕಾರ ಜಿಲ್ಲೆಯಲ್ಲಿ ವಾರ್ರೂಂ ಸೇರಿದಂತೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು.
ಈಗಿರುವ ನಿಯಮದಂತೆ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು/ ವಿದ್ಯಾರ್ಥಿಗಳು/ ಇತರ ಸಿಬ್ಬಂದಿಗಳು/ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರರು ಆರ‍್ಟಿ-ಪಿಸಿಆರ್ ಮಾದರಿ ಪರೀಕ್ಷೆಗಳನ್ನು ೧೫ ದಿವಸಕ್ಕೊಮ್ಮೆ ಮಾಡಬೇಕಾಗಿರುತ್ತದೆ.
ಆಂಬುಲೆನ್ಸ್ ಸೇವೆಗಳು ಸೇರಿದಂತೆ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಐಸಿಯು, ಐಸಿಯು ವೆಂಟಿಲೇಟರ್ ಇತ್ಯಾದಿಗಳ ಸಿದ್ಧತೆಯನ್ನು ಮಾಡಿಕೊಳ್ಳಲಾಗುವುದು ಅಥವಾ ಪ್ರಸ್ತುತ ಸಾಲಿನ ಅಕ್ಟೋಬರ್ ಮಾಹೆಯಲ್ಲಿ ಜಾರಿಗೊಳಿಸಿರುವ ಮಾದರಿಯಂತೆಯೇ ಜನವರಿ ಮೊದಲ ವಾರದಲ್ಲಿ ಸಿದ್ಧತೆಯನ್ನು ನಡೆಸಿ ಸನ್ನದ್ಧರಾಗಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಉತ್ತಮ ಸೇವೆ ಸೌಲಭ್ಯ ಆರೈಕೆಗಾಗಿ ಜಿಲ್ಲೆಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಪಿ.ಪಿ.ಪಿ ಮಾದರಿಯಲ್ಲಿ ಕೋವಿಡ್ ಕೇರ್ ಸೆಂಟರನ್ನು ಸನ್ನದ್ಧುಗೊಳಿಸಲು ಕ್ರಮ ವಹಿಸುವ ಬಗ್ಗೆಯೂ ಯೋಚಿಸಲಾಗುವುದು.
ಡಿಸೆಂಬರ್ ಕೊನೆಯ ವಾರದಲ್ಲಿ ಕೋವಿಡ್-೧೯ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಂತರವೇ ಶಾಲೆಗಳನ್ನು ತೆರೆಯುವ ಬಗ್ಗೆ ಪರಿಶೀಲಿಸಲಾಗುವುದೆಂದು ಸಚಿವ ಕೋಟಾ ಹೇಳಿದ್ದಾರೆ.
ಡಿಸೆಂಬರ್/ ಜನವರಿ ತಿಂಗಳಲ್ಲಿ ವೈರಸ್ ವೇಗವಾಗಿ ಹರಡುವ ಸಾಧ್ಯತೆ ಇರುವ ಕಾರಣ ಜಿಲ್ಲೆಯಲ್ಲಿ ನಡೆಯುವ ಉತ್ಸವ, ಧಾರ್ಮಿಕ ಸಭೆ ಸಮಾರಂಭಗಳು, ಸಾಮೂಹಿಕ ಕೂಟಗಳನ್ನು ನಿರ್ಬಂಧಿಸಲಾಗಿದೆ. ಈ ಮೊದಲು ಅನುಮತಿ ಪಡೆದಿದ್ದಲ್ಲಿ ಮದುವೆ ಸಮಾರಂಭಕ್ಕೆ ಕನಿಷ್ಠ ೧೦೦ ಜನರು, ರಾಜಕೀಯ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಕನಿಷ್ಠ ೨೦೦, ಶವಸಂಸ್ಕಾರಕ್ಕೆ ಕನಿಷ್ಠ ೨೫ ಜನರು ಮತ್ತು ಉತ್ತರಕ್ರಿಯೆಗೆ ಕನಿಷ್ಠ ೫೦ ಜನರು ಸೇರಬಹುದಾಗಿದೆ.
ಕೋವಿಡ್ ನಿಯಂತ್ರಣದಡಿಯಲ್ಲಿ ಮುಖಗವಸು ಧರಿಸುವಿಕೆ, ಸಾನಿಟೈಸರ್ ಬಳಕೆ, ಕೈ ತೊಳೆಯುವುದು ಇತ್ಯಾದಿ ಕ್ರಮಗಳನ್ನು ಉತ್ತೇಜಿಸಲು ಜಾಗೃತಿ ಮೂಡಿಸಲಾಗುವುದು.
ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕೋವಿಡ್ -೧೯ ಲಸಿಕೆ ಪರಿಚಯಕ್ಕಾಗಿ ಸಿದ್ಧತೆಯನ್ನು ತ್ವರಿತಗೊಳಿಸಲಾಗುವುದು.
ಈಜುಕೊಳಗಳು, ಕ್ರೀಡೆಗಳು ಮುಂತಾದವುಗಳನ್ನು ೨೦೨೧ ಸಾಲಿನ ಫೆಬ್ರವರಿ ವರೆಗೆ ತೆರೆಯದಂತೆ ನಿರ್ಬಂಧಿಸಲಾಗಿದೆ.
ಡಿಸೆಂಬರ್ ೭ನೇ ತಾರೀಖಿನಿಂದ ಈಚೇಗೆ ಜಿಲ್ಲೆಗೆ ಈಗಾಗಲೇ ೬೬ ಜನರು ಆಗಮಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಇವರೆಲ್ಲರನ್ನು ಪತ್ತೆ ಹಚ್ಚಿಆರ‍್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಈಗಾಗಲೇ ೪೧ ಮಂದಿಯ ವರದಿಯು ನೆಗೆಟಿವ್ ಆಗಿರುತ್ತದೆ. ಎಲ್ಲರೂ ಹೋಂಕ್ವಾರಂಟೈನ್‌ನಲ್ಲಿ ಇರುತ್ತಾರೆ. ಯಾರು ಸದ್ಯಕ್ಕೆ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ.
ಕೋವಿಡ್ ಬಗ್ಗೆ ವೃಥಾ ಆತಂಕಪಡುವ ಬದಲು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಕ್ಕೆ ಸರ್ವರೂ ಸಹಕರಿಸಬೇಕಾಗಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿನಂತಿಸಿದ್ದಾರೆ.