ಕೋವಿಡ್ ಬಗ್ಗೆ ನಿರ್ಲಕ್ಷ್ಯ ಸಲ್ಲದು – ಮುಂಜಾಗೃತಾ ಕ್ರಮ ಅತ್ಯಗತ್ಯ

?

ಬೀದರ:ಮಾ.22: ಕೊವಿಡ್ ಎಂಬುದು ಈ ವಿಶ್ವಕ್ಕಂಟಿದ ಮಹಾರೋಗ. ಇದನ್ನು ಯಾರೂ ಕೂಡಾ ನಿರ್ಲಕ್ಷ್ಯದಿಂದ ಕಾಣಬಾರದು. ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಿ ಕೋವಿಡ್ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸರ್ವರೂ ಪ್ರಯತ್ನಿಸಬೇಕೆಂದು ಬೆಳಗಾವಿಯ ಕೋವಿಡ್-19 ಟೆಸ್ಟಿಂಗ್ ಲ್ಯಾಬ್‍ನ ನೋಡೆಲ್ ಅಧಿಕಾರಿಗಳು ಹಾಗೂ ವಿಜ್ಞಾನಿ ಡಾ. ಬಾನಪ್ಪ ಉಂಗರ ನುಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರನ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ 13ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದ ಗೋಷ್ಠಿ-4 ಉದ್ದೇಶಿಸಿ “ಕೋವಿಡ್-19 ಆರೋಗ್ಯದ ಕುರಿತು ವಹಿಸಬೇಕಾದ ಎಚ್ಚರಿಕೆ” ವಿಷಯದ ಮೇಲೆ ಮಾತನಾಡಿದರು.
ಮಾಸ್ಕ್‍ನ್ನು ಕೇವಲ ಬಾಯಿಯ ಕೆಳಗೆ ತೋರಿಕೆಗಾಗಿ ಧರಿಸಿದರೆ ಸಾಲದು. ಅದನ್ನು ಮೂಗು ಬಾಯಿ ಮುಚ್ಚುವಂತೆ ಧರಿಸಬೇಕು. ಸಾಮಾಜಿಕ ಅಂತರ ಮತ್ತು ಸ್ಯಾನಿಟೈಜರ್ ಉಪಯೋಗಿಸುವುದರಿಂದ ವ್ಯಕ್ತಿಯ ಆರೋಗ್ಯಕ್ಕೆ ತೊಂದರೆಯಿಲ್ಲ. ನಾವು ಯುವಕರು, ನಮಗೆ ಏನೂ ಆಗಲ್ಲ ಎಂದು ಬೆಜವಾಬ್ದಾರಿತನದಿಂದ ಓಡಾಡಿದರೆ ಮನೆಯಲ್ಲಿರುವ ಹಿರಿಯರಿಗೆ ತೊಂದರೆಯಾಗುತ್ತದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣರ ಆದರ್ಶ ನಾವು ಪಾಲಿಸಬೇಕು. ಇನ್ನೂ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದರು. 5ಜಿ ಇರೋ ಕಡೆ ಕೊರೊನ ಹರಡಲ್ಲ. ಅಲ್ಕೋಹಾಲ್ ಕುಡಿಯುವುದರಿಂದ ವೈರಸ್ ಹೋಗಲ್ಲ. ಬದಲಾಗಿ ಅದು ಅಪಾಯಕಾರಿ. ಬಿಸಿಲು ಇರಲಿ, ಚಳಿ ಇರಲಿ ಕೊರೊನಾ ಬಂದೇ ಬರುತ್ತದೆ. ಅದಕ್ಕೆ ಕಾಲದ ಅಂತರವಿಲ್ಲ. ಕೋವಿಡ್ ಲಕ್ಷಣಗಳು ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯತಕ್ಕದ್ದು. ಈ ನಿಟ್ಟಿನಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ವಿಟಾಮಿನ್ ಗುಳಿಗೆ ಪಡೆಯುವುದರಿಂದ ಕೊರೊನಾ ಓಡಿಹೋಗಲ್ಲ. ವೈಜ್ಞಾನಿಕ ಚಿಕಿತ್ಸೆಯಿಂದ ಮಾತ್ರ ಕೋವಿಡ-19 ಹೋಗಲಾಡಿಸಲು ಸಾಧ್ಯ ಎಂದು ಡಾ. ಬಾನಪ್ಪ ಉಂಗರ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕ್ರಾಂತಿಕುಮಾರ ಸಿರ್ಸೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಾವಿಪ ಬೆಂಗಳೂರಿನ ಖಜಾಂಚಿ ಈ ಬಸವರಾಜ, ಕರಾವಿಪ ಕಾರ್ಯಕಾರಿಣಿ ಮಂಡಳಿ ಸದಸ್ಯ ಪಿಎಸ್ ಕೌಶಿಕ, ಸಂಜಿವಕುಮಾರ ಸ್ವಾಮಿ, ಬಾಬುರಾವ ದಾನಿ, ಪ್ರಕಾಶ ಲಕ್ಕಶೆಟ್ಟಿ, ದೇವಿಪ್ರಸಾದ ಕಲಾಲ, ಪಾಂಡುರಂಗ ಬೆಲ್ದಾರ, ಗುಂಡಪ್ಪ ಹುಡಗೆ, ಸುರೇಂದ್ರ ಹುಡಗಿಕರ್, ಕರಾವಿಪ ಸಹಾಯಕ ಯೋಜನಾಧಿಕಾರಿ ಅಶೋಕ ಆರ್, ಕರಾವಿಪ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.