ಕೋವಿಡ್ ಪ್ರಕರಣ ಹೆಚ್ಚಳ, ಎಚ್ಚರಿಕೆ ವಹಿಸುವಂತೆ ಡಿ.ಎಚ್.ಓ. ಮನವಿ

ಕಲಬುರಗಿ,ಏ.6: ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಫೆಬ್ರವರಿ ಮಾಹೆಯಲ್ಲಿ ಶೂನ್ಯವಿದ್ದ ಕೋವಿಡ್ ಪಾಸಿಟಿವ್ ಸಕ್ರೀಯ ಪ್ರಕರಣಗಳ ಸಂಖ್ಯೆ ಮಾರ್ಚ್ ಮಾಹೆ ಅಂತ್ಯಕ್ಕೆ 50ಕ್ಕೆ ತಲುಪಿದೆ. ಹೀಗಾಗಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ, ಸ್ಯಾನಿಟೈಸ್ ಬಳಕೆ ಮತ್ತು ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಚವಾಗಿ ತೊಳೆದುಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.
ಕೋವಿಡ್ ಲಕ್ಷಣಗಳಾದ ಕೆಮ್ಮು, ಶೀತ, ತಲೆನೋವು, ಜ್ವರ, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋಗಿ ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆಗೊಳಪಡಬೇಕು. ಕೋವಿಡ್ ಪಾಸಿಟಿವ್ ಬಂದಲ್ಲಿ ಒಂದು ವಾರಗಳ ಹೋಂ ಐಸೋಲೇಷನ್‍ನಲ್ಲಿರಬೇಕು.
ಕೋವಿಡ್ ಮಂದ ಸ್ವರೂಪದ ಲಕ್ಷಣ ಹೊಂದಿರುವರು ಪಲ್ಸ್ ಆಕ್ಸಿಮಿಟರ್‍ನಿಂದ ಆಗಾಗ ಸ್ವಯಂ ಪರೀಕ್ಷಿಸಿಕೊಳ್ಳಬೇಕು. ಆಕ್ಸಿಜನ್ ಸ್ಯಾಚುರೇಶನ್ ಶೇ.95 ಕ್ಕಿಂತ ಕಡಿಮೆ ಆದಲ್ಲಿ ಅಥವಾ ಮಂದ ಸ್ವರೂಪದ ಲಕ್ಷಣಗಳು ಗಂಭೀರ ಸ್ವರೂಪಕ್ಕೆ ಬದಲಾವಣೆಗೊಂಡಲ್ಲಿ ಅಥವಾ ಉಸಿರಾಟದ ತೊಂದರೆ ಹೆಚ್ಚಾದಲ್ಲಿ ಕಲಬುರಗಿಯ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಅಥವಾ ಆಯಾ ತಾಲೂಕಿನಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು.
ಇನ್ನು ಪ್ರವಾಸದ ಸಂದರ್ಭದಲ್ಲಿ ಮತ್ತು ಜನಸಂದಣಿ ಸ್ಥಳಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಕ್ಕೆ ಭೇಟಿ ನೀಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಎಂದು ಡಾ. ರಾಜಶೇಕರ ಮಾಲಿ ತಿಳಿಸಿದ್ದಾರೆ.
ಗರ್ಭಿಣಿಯರು, ಮಕ್ಕಳು ಎಚ್ಚರಿಕೆ ವಹಿಸಬೇಕು: ಗರ್ಭಿಣಿಯರು, ಮಕ್ಕಳು, ವಯೋವೃದ್ದರು ಹಾಗೂ ಇತರ ಗಂಭೀರ ಸ್ವರೂಪದ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವರಿಗೆ ಕೋವಿಡ್ ಸೋಂಕು ಬೇಗ ತಗಲುವ ಸಾಧ್ಯತೆ ಹೆಚ್ಚಿವುದರಿಂದ ಇಂತಹ ವ್ಯಕ್ತಿಗಳು ತುಂಬಾ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.