ಕೋವಿಡ್ ಪ್ರಕರಣವನ್ನು ತಡೆಗಟ್ಟುವ ಹಿನ್ನಲೆ ಮುನ್ನೆಚ್ಚರಿಕೆ ಕ್ರಮ

ಚಾಮರಾಜನಗರ, ಏ.04-ಕೋವಿಡ್-19 ಪ್ರಕರಣಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಜಿಲ್ಲೆಯ ವಿವಿಧ ಇಲಾಖೆಗಳು ಸಕ್ರಿಯವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂದಾಗುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏರುಗತಿಯಲ್ಲಿರುವ ಕೊರೊನಾ ಸೋಂಕನ್ನು ತಡೆಯಲು ಇಲಾಖೆಗಳು ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಹ ಇಲಾಖೆಗಳಿಗೆ ಅಗತ್ಯ ಸಹಕಾರ ನೀಡಲಿದೆ. ಸಂಬಂಧಪಟ್ಟ ಇಲಾಖೆಗಳು ಕೋವಿಡ್ ತಡೆ ಕಾರ್ಯದಲ್ಲಿ ಸಮನ್ವಯದಿಂದ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಕೋವಿಡ್‍ನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.
ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿಯಿಂದ ನಡೆದು ಕೊಳ್ಳಬೇಕು. ಕೋವಿಡ್-19 ಉಲ್ಬಣವಾದ ಸಂದರ್ಭದಲ್ಲಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಜಿಲ್ಲೆ ಗಮನಾರ್ಹ ಪ್ರಗತಿ ಸಾಧಿಸಿತ್ತು. ಪ್ರಸ್ತುತ ಕೋವಿಡ್ ತಡೆಗಾಗಿ ಸರ್ಕಾರ ನೂತನ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದು, ಅದರನ್ವಯ ಸೂಚಿಸಲಾಗಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಎಲ್ಲಾ ಇಲಾಖೆಗಳು ಸಮರೋಪಾದಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದರು.
ವಿದ್ಯಾಗಮ ಕಾರ್ಯಕ್ರಮವು ಸೇರಿದಂತೆ 6 ರಿಂದ 9ನೇ ತರಗತಿಗಳನ್ನು ಸ್ಥಗಿತಗೊಳಿಸಬೇಕು. ವಿದ್ಯಾರ್ಥಿನಿಲಯಗಳು, ವಸತಿ ಶಾಲೆಗಳು ಹಾಗೂ ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿ, ಉನ್ನತ್ತ ಶಿಕ್ಷಣ, ವೃತ್ತಿಪರ ಕೊರ್ಸ್‍ಗಳು, ವಿ.ವಿ. ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳು ಕೋವಿಡ್ ಮುಂಜಾಗ್ರತಾ ನಿಯಮಗಳನ್ನು ಪಾಲನೆ ಮಡುವ ಮೂಲಕ ಎಂದಿನಂತೆ ಮುಂದುವರೆಯಲಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಧಾರ್ಮಿಕ ಸ್ಥಳಗಳಲ್ಲಿ ವ್ಯಯಕ್ತಿಕ ಪ್ರಾರ್ಥನೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಆಚರಣೆಗಳು, ಸಂತೆ, ಜಾತ್ರೆ, ಮಹೋತ್ಸವಗಳು ಹಾಗೂ ಮೇಳಗಳನ್ನು ನಿಷೇಧಿಸಲಾಗಿದೆ. ಜನರು ಹೆಚ್ಚಾಗಿ ಸೇರುವಂತಹ ಅಪಾರ್ಟ್‍ಮೆಂಟ್, ಕಾಂಪ್ಲೆಕ್ಸ್, ಕ್ಲಬ್‍ಹೌಸ್, ಪಾರ್ಟಿಹಾಲ್, ಜಿಮ್ ಹಾಗೂ ಈಜುಕೊಳ ಇತ್ಯಾದಿಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು. ಯಾವುದೇ ರ್ಯಾಲಿ, ಮುಷ್ಕರ, ಧರಣಿಗಳನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೋವಿಡ್ ಮುನ್ನೇಚ್ಚರಿಕೆಗಾಗಿ ಕಡ್ಡಾಯವಾಗಿ ಮುಖಗವಸು, ದೈಹಿಕ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್‍ವಾಷ್‍ಗಳನ್ನು ಪ್ರತಿಯೊಬ್ಬರು ಬಳಸಬೇಕು. ತಪ್ಪಿದಲ್ಲಿ ಪೊಲೀಸ್, ನಗರಸಭೆ, ಕಂದಾಯ ಅಧಿಕಾರಿ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಿಲ್ ಕಲೆಕ್ಟರ್ ನಿಗದಿಪಡಿಸಲಾಗಿರುವ ದಂಡ ವಿಧಿಸಬೇಕು. ಅಂತಹ ಕಾರ್ಯಚರಣೆಯನ್ನು ಸಂಬಂಧಪಟ್ಟ ನಿಯೋಜಿತ ಅಧಿಕಾರಿಗಳು ಚುರುಕುಗೊಳಿಸಬೇಕು. ಆಗ ಮಾತ್ರ ಜನರಲ್ಲಿ ಜಾಗೃತಿ ಉಂಟಾಗಲಿದೆ ಎಂದು ಹೇಳಿದರು.
ಶಾಪಿಂಗ್ ಮಾಲ್, ಮಾರ್ಕೆಟ್, ಡಿಪಾರ್ಟ್‍ಮೆಂಟಲ್ ಸ್ಟೋರ್, ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‍ಗಳನ್ನು ಶಿಷ್ಟಾಚಾರದನ್ವಯ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳವರೆಗೂ ಮುಚ್ಚಬೇಕು. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ನಿಗದಿತ ದಂಡ ವಿಧಿಸಲಾಗುವುದು. ಸಾರ್ವಜನಿಕ ಪ್ರಯಾಣದ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ಗಳಲ್ಲಿ ನಿಗದಿಪಡಿಸಿದಸನ ವ್ಯವಸ್ಥೆ ಮೀರಬಾರದು. ಬಸ್‍ಗಳಲ್ಲಿ ಯಾರು ಸಹ ನಿಂತು ಸಂಚರಿಸುವಂತಿಲ್ಲ. ಬಸ್ ಚಾಲಕರು, ನಿರ್ವಾಹಕರು ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಲ್ಲಿ ಪ್ರಯಾಣಿಕರಿಗೆ ಮಾದರಿಯಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೆಂದ್ರ ಹಾಗೂ ಪ್ರಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಣೆ ಕಾರ್ಯ ತ್ವರಿತವಾಗಬೇಕು. ಪರೀಕ್ಷೆಗಳನ್ನು ಸಮಖ್ಯೆಯನ್ನು ದುಪ್ಪಟ್ಟುಗೊಳಿಸಬೇಕು. ಇದಕ್ಕಾಗಿ ಡಾಟಾ ಎಂಟ್ರಿ ಆಪರೇಟರ್, ಟೆಕ್ನಿಷಿಯನ್ಸ್, ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ಮುಖ್ಯವಾಗಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ಗುರುತಿಸಿ ಕರೆತಂದು ಲಸಿಕೆ ಹಾಕಿಸುವಲ್ಲಿ ಎಲ್ಲರ ಪಾತ್ರ ಮಹತ್ವದ್ದಾಗಿದೆ ಎಂದರು.
45 ವರ್ಷ ಮೇಲ್ಪಟ್ಟ ಧಾರ್ಮಿಕ ಅಲ್ಪ ಸಂಖ್ಯಾತರು ಕೋವಿಡ್ ಲಸಿಕೆ ಪಡೆಯಲು ಮುಂದಾಗಿರುವುದರ ಬಗ್ಗೆ ಸಭೆಯ ಗಮನ ಸೆಳೆದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಆಯಾ ಭಾಗದ ಧರ್ಮಗುರುಗಳು, ಮೌಲ್ವಿಗಳು ಹಾಗೂ ವಕ್‍ಬೋರ್ಡ್ ಅಧಿಕಾರಿಗಳ ಸಭೆ ಕರೆದು ಮನವೊಲಿಸುವಂತೆ ಸಂಬಂಧಪಟ್ಟ ತಹಶೀಲ್ದಾರರುಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಕಡ್ಡಾಯವಾಗಿದ್ದು. ರಾಜ್ಯ, ಜಿಲ್ಲೆಯ ಗಡಿಭಾಗಗಳಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ವ್ಯಾಪಕವಾಗಿ ಪರಿಶೀಲಿಸಲಾಗುತ್ತಿದ್ದು, ಇದನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿತಾ ಹದ್ದಣ್ಣನವರ್, ಡಿ.ವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಆರ್.ಸಿ.ಎಚ್. ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾಸ್ಪತ್ರೆಯ ಅರವಳಿಕೆ ತಜ್ಞರಾದ ಡಾ. ಮಹೇಶ್, ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಸೀಲ್ದಾರರು ಇದ್ದರು.