ಕೋವಿಡ್ ಪ್ರಕರಣಗಳು ಇಳಿಮುಖ : ಚಳಿಗಾಲದಲ್ಲೂ ಮುಂಜಾಗ್ರತಾ ಕ್ರಮ ವಹಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮನವಿ

ಚಾಮರಾಜನಗರ, ನ.03- ಜಿಲ್ಲೆಯಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು ಇಳಿಮುಖವಾಗಿದ್ದು ಪಾಸಿಟಿವಿಟಿ ಪ್ರಮಾಣ ಶೇ 1.6ರಿಂದ 1.7ರ ನಡುವೆ ಇದೆ. ಮುಂದೆಯೂ ಜಿಲ್ಲೆಯ ಜನರು ಕೋವಿಡ್ ಪರಿಣಾಮಕಾರಿ ನಿಯಂತ್ರಣಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಮನವಿ ಮಾಡಿದರು.
ಜಿಲ್ಲಾಡಳಿತವು ಜಿಲ್ಲೆಯಲ್ಲಿ ಕೋವಿಡ್-19ರ ನಿರ್ವಹಣೆ ಹಾಗೂ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಸಂಬಂಧ ಫೇಸ್ ಬುಕ್ ಲೈವ್ ಮೂಲಕ ವಿವರಿಸುವ ವೇಳೆ ಅವರು ಈ ಮನವಿ ಮಾಡಿದರು.
ಜಿಲ್ಲೆಯಲ್ಲಿ ಇದುವರೆಗೆ 6 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಪ್ರಸ್ತುತ 180 ರಿಂದ 185 ರಷ್ಟು ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಕಳೆದ ಕೆಲವು ದಿನಗಳಿಂದ ಕೋವಿಡ್ ನಿಂದ ಮರಣ ಹೊಂದುವವರ ಪ್ರಮಾಣ ಸಹ ಇಳಿಮುಖವಾಗಿದೆ. ಸೆಪ್ಟೆಂಬರ್ ನಿಂದ ಅಕ್ಟೋಬರ್ 15ರವರೆಗೆ ಜಾಸ್ತಿಯಾಗಿದ್ದ ಮರಣ ಪ್ರಮಾಣ ಕಳೆದ 10 ದಿನಗಳಲ್ಲಿ 2ಕ್ಕೆ ಇಳಿದಿದೆ. ಇದು ಆಶಾದಾಯಕ ಸಂಗತಿಯಾಗಿದೆ ಎಂದರು.
ನಗರ ಪ್ರದೇಶಗಳಲ್ಲೇ ಹೆಚ್ಚು ಮರಣ ಪ್ರಕರಣಗಳು ವರದಿಯಾಗಿದ್ದವು. ವಿಶೇಷವಾಗಿ ಚಾಮರಾಜನಗರ, ಕೊಳ್ಳೇಗಾಲ ಪಟ್ಟಣ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮರಣ ಸಂಭವಿಸಿದ್ದವು. ಇತ್ತೀಚೆಗೆ ಈ ಸಂಖ್ಯೆ ಕಡಿಮೆಯಾಗಿದೆ. ಮುಂದೆಯೂ ಜನರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕೋವಿಡ್ ಪ್ರಕರಣಗಳನ್ನು ಕಳೆದ ಬೇಸಿಗೆ ಹಾಗೂ ಮಳೆಗಾಲದಲ್ಲಿ ಎದುರಿಸಿದ್ದೇವೆ. ಇದೀಗ ನವೆಂಬರ್ ನಲ್ಲಿ ಚಳಿಗಾಲ ಆರಂಭವಾಗಿದ್ದು ಮುಂಬರುವ ಇನ್ನೆರಡು ತಿಂಗಳಲ್ಲಿ ಜಿಲ್ಲಾ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಶೀತ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಜನರು ಈ ಬಗೆಯ ಯಾವುದೇ ಲಕ್ಷಣವಿರಲಿ ಅಥವಾ ಉಸಿರಾಟ ತೊಂದರೆ ಇರಲಿ ಕೂಡಲೇ ಹತ್ತಿರದ ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಕಂಡು ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಕಾರಣದಿಂದ ಆರೋಗ್ಯದ ಬಗ್ಗೆ ಯಾರೂ ಉದಾಸೀನ ಅಸಡ್ಡೆ ಮಾಡಬಾರದು. ಚಳಿಗಾಲದ ಸಂದರ್ಭದಲ್ಲಿ ಉಸಿರಾಟ ತೊಂದರೆ (ಸಾರಿ) ಹಾಗೂ ಶೀತದಂತಹ (ಐಎಲ್‍ಐ) ಅನಾರೋಗ್ಯ ಜಾಸ್ತಿಯಾಗುವ ನಿರೀಕ್ಷೆಯಿದೆ. ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು, ಭೌತಿಕ ಅಂತರ ಕಾಯ್ದುಕೊಳ್ಳಬೇಕು, ಚಳಿಗಾಲದಲ್ಲಿ ಇನ್ನೂ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ತಾಲ್ಲೂಕು ಕೇಂದ್ರಗಳಲ್ಲಿಯೇ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಸಂತೇಮರಹಳ್ಳಿ, ಗುಂಡ್ಲುಪೇಟೆ ಪಟ್ಟಣದಲ್ಲಿಯೂ ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಕೊಳ್ಳೇಗಾಲ, ಯಳಂದೂರು ಪಟ್ಟಣದಲ್ಲಿಯೂ ಆರೈಕೆ ಕೇಂದ್ರಗಳನ್ನು ಪ್ರಾರಂಬಿಸಲು ಸಿದ್ದತೆ ನಡೆದಿದೆ. ಒಟ್ಟಾರೆ ಆಕ್ಸಿಜನ್ ಸೌಲಭ್ಯವುಳ್ಳ 250 ಹಾಸಿಗೆಗಳು ಲಭ್ಯವಿದೆ. ಹೀಗಾಗಿ ಕೋವಿಡ್ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಯಾವುದೇ ಕೊರತೆಯಿಲ್ಲ ಎಂದರು.
ಕೋವಿಡ್ ಲಸಿಕೆ ಲಭ್ಯವಾಗುವ ನಿರೀಕ್ಷೆ ಹಿನ್ನಲೆಯಲ್ಲಿ ಸರ್ಕಾರದ ಸೂಚನೆ ಅನುಸಾರ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು ನಡೆಸಿ ಮೊದಲ ಹಂತದಲ್ಲಿ ಲಸಿಕೆ ನೀಡಬೇಕಿರುವವರ ಮಾಹಿತಿಯನ್ನು ಕಲೆ ಹಾಕಿ ಪೂರ್ವ ಸಿದ್ದತೆಯ ಯೋಜನೆ ವರದಿಯನ್ನು ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳಿಗೆ ಜಿಲ್ಲಾಡಳಿತ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲಾ ಜನತೆ ಸಹ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಮನವಿ ಮಾಡಿದರು.