ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಧರ್ಮಸ್ಥಳ ಕ್ಷೇತ್ರದಿಂದ ಆಮ್ಲಜನಕ ಪೂರೈಕೆ

ಧರ್ಮಸ್ಥಳ, ಮೇ ೫- ಕೊರೋನಾ ಸಮಸ್ಯೆಯ ಎರಡನೇ ಅಲೆಯಲ್ಲಿ ಹೆಚ್ಚಿನ ಪೀಡಿತರು ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದು, ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯನ್ನು ಗಮನಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಗತ್ಯವಿರುವ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಕುರಿತಂತೆ ರಾಷ್ಟ್ರದ ಪ್ರಮುಖ ಆಮ್ಲಜನಕ ಉತ್ಪಾದಕಾ ಸಂಸ್ಥೆ, ಬಳ್ಳಾರಿಯ ಜಿಂದಾಲ್ ಸ್ಟೀಲ್ ಪ್ಲಾಂಟ್‌ನ ಅಧಿಕಾರಿಗಳೊಡನೆ ಚರ್ಚಿಸಿದ್ದು, ಅದರ ಪರಿಣಾಮವಾಗಿ ಮಂಗಳವಾರ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಒಟ್ಟು ೫.೫ ಟನ್ ಆಮ್ಲಜನಕವನ್ನು ಒದಗಿಸಲಾಯಿತು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್,ಹೆಚ್. ಮಂಜುನಾಥ್ ತಿಳಿಸಿದರು.

ಇದರಿಂದಾಗಿ ವೆನ್‌ಲಾಕ್ ಆಸ್ಪತ್ರೆಯ ಮೂರು ದಿನದ ಆಮ್ಲಜನಕವನ್ನು ಪೂರೈಸಿದಂತಾಗಿದೆ. ಈ ಸಂಬಂಧ ಬಳ್ಳಾರಿಯ ತೋರಣಗಲ್‌ನಿಂದ ಆಮ್ಲಜನಕವನ್ನು ಹೊತ್ತು ತಂದ ಕ್ರಯೋಜನಿಕ್ ಟ್ಯಾಂಕರನ್ನು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಮತ್ತು ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ರಮಾಕಾಂತ್ ಕುಂಟೆ ಅವರ ಸಮ್ಮುಖದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅವರು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್ ಕೆ.ವಿ. ಅವರಿಗೆ ಹಸ್ತಾಂತರಿಸಿ, ಆಸ್ಪತ್ರೆಗೆ ಆಮ್ಲಜನಕವನ್ನು ವರ್ಗಾವಣೆ ಮಾಡಿದರು.

ಕ್ರಯೋಜನಿಕ್ ಟ್ಯಾಂಕರ್‌ಗಳ ಕೊರತೆಯಿರುವ ಸಂದರ್ಭದಲ್ಲಿ ಡಾ. ಹೆಗ್ಗಡೆಯವರ ಬೇಡಿಕೆಗೆ ತುರ್ತಾಗಿ ಸ್ಪಂದಿಸಿದ ಏರ್ ವಾಟರ್ ಇಂಡಿಯಾ ಪ್ರೈವೇಟ್ ಲಿ. ಇದರ ದಕ್ಷಿಣ ಭಾರತದ ಮಾರಾಟ ಅಧಿಕಾರಿ ತ್ರಿದೇವ್ ಬ್ಯಾನರ್ಜಿ ಮತ್ತು ಹರೀಶ್ ಪ್ರಭು ಅವರು ಸಾಗಾಟದ ಸಂಪೂರ್ಣ ವ್ಯವಸ್ಥೆಯನ್ನು ಅಲ್ಪ ಸಮಯದಲ್ಲಿಯೇ ಮಾಡಿದ್ದಾರೆ. ಸಾಗಾಟದಲ್ಲಿ ಬೆಂಗಳೂರಿನ ಹೊಸಕೋಟೆಯ ಸ್ಪೆಕ್ ಆಂಡ್ ಕಾಲ್ ಗ್ಯಾಸಸ್ ಲಿ. ಕಂಪನಿಯವರು ಸಹಕಾರ ನೀಡಿದ್ದಾರೆ. ಆಮ್ಲಜನಕ ಖರೀದಿ ಮತ್ತು ಸಾಗಾಟದ ಸಂಪೂರ್ಣ ವೆಚ್ಚವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಭರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸುಮಾರು ೧೦೦ ಟನ್ ಆಮ್ಲಜನಕವನ್ನು ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.