ಕೋವಿಡ್ ಪಾಸಿಟಿವ್ ಬಂದವರು ತಿರುಗಾಡುವುದು ಕಂಡು ಬಂದರೆ ಕೇಸು ದಾಖಲು

ಸುಳ್ಯ, ಮೇ ೫- ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳು ಹೊರಗಡೆ ತಿರುಗಾಡುವುದು ಕಂಡು ಬಂದರೆ ಅವರ ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಅನಿತಾಲಕ್ಷ್ಮಿ ಹೇಳಿದ್ದಾರೆ.

ಕೊರೋನಾ ಮುಂಜಾಗ್ರತೆಯ ಹಿನ್ನಲೆಯಲ್ಲಿ ಸುಳ್ಯ ನಗರ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳು ಹೊರಗೆ ಬಂದು ತಿರುಗಾಡುವ ಪ್ರಕರಣ ಇದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದಾಗ ಈ ರೀತಿಯ ಪ್ರಕರಣಗಳು ಕಂಡು ಬಂದರೆ ಕೂಡಲೇ ಗಮನಕ್ಕೆ ತನ್ನಿ ಅಂತವರ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಕೊರೋನಾ ಪೀಡಿತರನ್ನು ಮತ್ತು ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ಬಿಗು ಮಾಡಬೇಕು. ಹಾಗಾದರೆ ಮಾತ್ರ ರೋಗ ಹರಡುವ

ಸರಪಳಿ ತುಂಡರಿಸಲು ಸಾಧ್ಯ ಎಂದರು. ಕ್ವಾರಂಟೈನ್ ನಿಯಮ ಕಡ್ಡಾಯ ಮಾಡಲು ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಪ್ರತಿ ವಾರ್ಡ್ ಗಳಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಒತ್ತು ನೀಡಲು ಅವರು ಸದಸ್ಯರಿಗೆ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ ವಾರ್ಡ್ ಮಟ್ಟದ ಕೊರೋನಾ ಕಾರ್ಯಪಡೆಯನ್ನು ಸಕ್ರೀಯಗೊಳಿಸಬೇಕು. ಕೋವಿಡ್ ಸೋಂಕು ಪೀಡಿತರಿಗೆ ಅಗತ್ಯ ವಸ್ತುಗಳನ್ನು ಮತ್ತು ಇತರ ನೆರವನ್ನು ಮಾಡಲು ಒತ್ತು ನೀಡಬೇಕು ಎಂದು ಹೇಳಿದರು.

ನಗರದಲ್ಲಿ ವಾರ್ಡ್ ಸಮೀಕ್ಷೆ ನಡೆಸಲಾಗುವುದು.

ಅದಕ್ಕಾಗಿ ಅಧಿಕಾರಿಗಳ ತಂಡ ರಚನೆ ಮಾಡಲಾಗುವುದು. ವಾರ್ಡ್ ನಲ್ಲಿ ಪಾಸಿಟಿವ್ ಪ್ರಕರಣ ಗೊತ್ತಾದರೆ ಆ ಮನೆ ಕ್ವಾರಂಟೈನ್ ಖಡ್ಡಾಯ ಎಂದು ಹೇಳಿದರು.

ಈ ರೀತಿಯ ನಿರ್ಲಕ್ಷ್ಯದಿಂದ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಆಗುತಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದರ ಜೊತೆಗೆ ಕೈಗಳ ಶುಚಿತ್ವ ಅತೀ ಅಗತ್ಯ ಎಂದು ಹೇಳಿದರು. ಕರ್ಫ್ಯೂ ಮಾರ್ಗಸೂಚಿಗಳನ್ನು ಖಡ್ಡಾಯವಾಗಿ ಪಾಲಿಸಲು ಪೊಲೀಸ್ ಇಲಾಖೆ ಪೂರ್ಣ ಪ್ರಮಾಣದಲ್ಲಿ ಪ್ರಯತ್ನ ನಡೆಸುತಿದೆ. ೭ ಕಡೆ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಕರ್ಫ್ಯೂ ಮಾನದಂಡ ಉಲ್ಲಂಘನೆಗೆ ೩ ಕೇಸು ದಾಖಲಿಸಲಾಗಿದೆ. ಮಾಸ್ಕ್ ಹಾಕದಕ್ಕೂ ದಂಡ ವಿಧಿಸಲಾಗಿದೆ ಎಂದು ಎಸ್ ಐ ಹರೀಶ್ ಎಂ.ಆರ್.ಹೇಳಿದರು ಜನರು ಸ್ಥಳೀಯ ವಾಗಿ ಆಹಾರ ವಸ್ತುಗಳ ಖರೀದಿಸಬೇಕೆಂದು ಆದೇಶ ಇದೆ. ಆದರೆ ಜನರು ನಗರಕ್ಕೆ ಬರುತ್ತಿದ್ದಾರೆ. ಇದರಿಂದ ಜನ ದಟ್ಟಣೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಸುಳ್ಯದಲ್ಲಿ ಸುಸಜ್ಜಿತ ಕೋವಿಡ್ ಪಾಲನಾ ಕೇಂದ್ರ ತೆರೆಯಲಾಗಿದೆ. ಯಾವುದೇ ಕೋವಿಡ್ ಸೋಂಕಿತರನ್ನು ಕರೆದೊಯ್ಯಲು ಉಚಿತ ಆಂಬುಲೆನ್ಸ್ ಸೇವೆ ನೀಡಲಾಗುವುದು. ಕೋವಿಡ್ ಸೋಂಕಿತರು ಮೃತಪಟ್ಟರೆ ಸಾಗಾಟ, ಅಂತ್ಯ ಸಂಸ್ಕಾರವನ್ನು ನಡೆಸುವ ಜವಾಬ್ದಾರಿ ಸರಕಾರದ್ದು. ಅದನ್ನು ಉಚಿತವಾಗಿ ಮಾಡಲಾಗುವುದು ಎಂದು ತಹಶಿಲ್ದಾರ್ ಅನಿತಾಲಕ್ಷ್ಮಿ ತಿಳಿಸಿದರು.

ನ.ಪಂ.ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದ ನಾಯ್ಕ, ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಸದಸ್ಯರುಗಳಾದ, ಡೇವಿಡ್ ಧೀರಾ ಕ್ರಾಸ್ತ, ಶರೀಫ್ ಕಂಠಿ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ, ಶಶಿಕಲಾ ನೀರಬಿದಿರೆ, ಶೀಲಾ ಅರುಣ ಕುರುಂಜಿ, ಶಿಲ್ಪಾ ಸುದೇವ್, ಪ್ರವಿತಾ ಮೊದಲಾದವರು ಉಪಸ್ಥಿತರಿದ್ದರು.