ಕೋವಿಡ್ ಪಾಸಿಟಿವಿಟಿ ರೇಟ್ ಶೇ.16 ರಷ್ಟು ಇಳಿಕೆ : ಕೇಂದ್ರ ಸಚಿವ ಜೋಶಿ

ಧಾರವಾಡ,ಮೇ30:ಕೋವಿಡ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಕಡಿಮೆಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.16 ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದಲ್ಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಜಿಲ್ಲೆಯ ಧಾರವಾಡ ತಾಲೂಕಿನ ಯಾದವಾಡ ಮತ್ತು ಗರಗದಲ್ಲಿ ಜಿಲ್ಲಾಡಳಿತ ತೆರೆದಿರುವ ಕೋವಿಡ್ ಕಾಳಜಿ (ಕೇರ್ ಸೆಂಟರ್) ಕೇಂದ್ರಗಳನ್ನು ಪರಿಶೀಲಿಸಿ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 34 ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಲಾಗಿದ್ದು, 14 ನಗರ ಪ್ರದೇಶಗಳಲ್ಲಿ ಮತ್ತು 20 ಗ್ರಾಮೀಣ ಪ್ರದೇಶಗಳಲ್ಲಿ ಆರಂಭವಾಗಿವೆ. ಕೋವಿಡ್ ಸೋಂಕು ಹರಡುವಿಕೆ ನಿಧಾನವಾಗಿ ಕಡಿಮೆಯಾಗುತ್ತಿದ್ದು ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಿಮ್ಸ್ ಆಸ್ಪತ್ರೆಯನ್ನು ಒಳಗೊಂಡಂತೆ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 2400 ಬೆಡ್ ಗಳಿದ್ದು, 1990 ಬೆಡ್ ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು 410 ಬೆಡ್‍ಗಳು ಖಾಲಿ ಇವೆ. ಜಿಲ್ಲೆಯಲ್ಲಿ ಈಗಾಗಲೇ ಬೆಡ್ ಮತ್ತು ವೆಂಟಿಲೇಟರ್‍ಗಳ ಕುರಿತ ಒತ್ತಡ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಲ್ಲ. ಎಮ್.ಆರ್.ಪಿ.ಸಿ, ಆಯ್.ಯು.ಸಿ.ಎಲ್ ಮತ್ತು ಎಲ್ ಆ್ಯಂಡ್ ಟಿ ಸಂಸ್ಥೆಗಳಿಂದ ಜಿಲ್ಲೆಗಳಿಗೆ ಆಕ್ಸಿಜನ್ ಪ್ಲಾಂಟ್‍ಗಳನ್ನು ಕೊಡುಗೆ ನೀಡಲಾಗಿದ್ದು ಸದ್ಯದಲ್ಲೇ ಭೂಮಿ ಪೂಜೆ ಮಾಡಿ ಅವುಗಳನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಅವರು ತಿಳಿಸಿದರು.
ನಂತರ ಬೃಹತ, ಮದ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಮಾತನಾಡಿ, ಆಕ್ಸಿಜನ್ ಸಮಸ್ಯೆಯನ್ನು ಸರಿ ಮಾಡಲು ಪ್ರಯತ್ನಿಸುತ್ತಿದ್ದೇವೆ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಹೀಗಾಗಿ ಮುಂದೆ ಆಕ್ಸಿಜನ್ ಕೊರತೆ ಕಂಡುಬರುವುದಿಲ್ಲ. ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕದ ಸರಬರಾಜು ಪ್ರತಿದಿನ ಆಗುತ್ತಿದೆ ಎಂದು ಸಚಿವರು ಹೇಳಿದರು.
ಕಿರಾಣಿ ವ್ಯಾಪಾರಸ್ಥರ ಬೇಡಿಕೆಯ ಆಧಾರದ ಮೇಲೆ ಮೂರು ದಿನ ಬೆಳಗ್ಗೆ 6 ರಿಂದ 12 ಗಂಟೆವರೆಗೆ ವ್ಯಾಪಾರಕ್ಕಾಗಿ ಅವಕಾಶ ಮಾಡಲಾಗಿದೆ. ಜನಸಂದಣಿಯನ್ನು ನಿಯಂತ್ರಿಸುಲು ನಿರ್ದಿಷ್ಟ ಅವಧಿಯನ್ನು ನೀಡಲಾಗಿದೆ. ಸರ್ಕಾರದ ಎಲ್ಲ ಮಾರ್ಗಸೂಚಿಗಳ ಹೊರತಾಗಿಯೂ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕಾಗಿ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಬೂರಾಮ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಉಪವಿಭಾಗಾಧಿಕಾರಿ ಡಾ.ಗೋಪಾಲ ಕೃಷ್ಣ.ಬಿ., ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಾನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾ ಆರ್.ಸಿ.ಎಚ್.ಓ. ಡಾ.ಎಸ್.ಎಂ.ಹೊನಕೆರಿ, ಡಾ.ಶಶಿ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ., ಜಿಲ್ಲಾ ಔಷಧಿ ನಿಯಂತ್ರಕ ಮಲ್ಲಿಕಾರ್ಜು ಕೆ.ಎಸ್., ತಹಶೀಲ್ದಾರ ಸಂತೋಷ ಬಿರಾದಾರ, ಕಿಮ್ಸ್‍ನ ಅಧಿಕಾರಿಗಳಾದ ರಾಜಶೇಖರ ದ್ಯಾಬೇರಿ, ಲಕ್ಷ್ಮೀಕಾಂತ ಲೊಕರೆ, ಡಿಮ್ಹಾನ್ಸ್‍ನ ರಾಘವೇಂದ್ರ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿ ಪೂರ್ವದಲ್ಲಿ ಸಚಿವರು ಭಾರತೀಯ ಜೈನ ಸಂಘಟನೆ ಸ್ಥಾಪಿಸಿರುವ ಆಕ್ಸಿಜನ್ ಬ್ಯಾಂಕ್ ಉದ್ಘಾಟಿಸಿದರು.