ಕೋವಿಡ್ ಪಾಸಿಟಿವಿಟಿ ಕಡಿಮೆ ಮಾಡುವುದೇ ಗುರಿ: ಹೆಬ್ಬಾರ

ಮುಂಡಗೋಡ,ಮೇ30: ಜಿಲ್ಲೆಯಲ್ಲಿ ಸಮರ್ಪಕವಾಗಿ ಕೋವಿಡ್ ನಿರ್ವಹಣಾ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರ, ಅಧಿಕಾರಿಗಳು, ಸಾರ್ವಜನಿಕರ ಹಾಗೂ ಮಾದ್ಯಮದವರ ಸಹಕಾರದಿಂದಾಗಿ ಶೇ 50 ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರವು ಶೇ 20 ಕ್ಕೆ ಇಳಿಯುವ ಮೂಲಕ ನಿಯಂತ್ರಣಕ್ಕೆ ಬಂದಿದ್ದು, ಇನ್ನೊಂದು ವಾರದಲ್ಲಿ ಶೇ 10 ಕ್ಕಿಂತ ಕಡಿಮೆ ಮಾಡುವ ಗುರಿ ನಮ್ಮದಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ಪಟ್ಟಣದ ತಾಲೂಕಾ ಆಸ್ಪತ್ರೆ ಆವರಣದಲ್ಲಿ ಹೆಬ್ಬಾರ ಕೋವಿಡ್ ಔಷದಿ ಕಿಟ್ ವಿತರಣೆ ಹಾಗೂ 2 ನೂತನ ಆಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದ ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು. 38 ಜನ ತಜ್ಞ ವೈದ್ಯರನ್ನು ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರ ನೀಡಿದೆ. ಜಿಲ್ಲೆಯಲ್ಲಿಯೇ ಆಕ್ಸಿಜನ್ ಉತ್ಪಾದನಾ ಘಟಕಗಳನ್ನ ಪ್ರಾರಂಬಿಸಿದ್ದರಿಂದ ಯಾವುದೇ ರೀತಿ ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲೆಯ ಜಿಲ್ಲೆಯ ಎಲ್ಲ ಕ್ಷೇತ್ರದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಆಂಬುಲೆನ್ಸ್ ಗಳನ್ನು ನೀಡಿದ್ದಾರೆ.
ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಹೆಚ್ಚಿಸುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ವೈದ್ಯರ ಸಲಹೆಯಂತೆ 30 ಸಾವಿರ ಕೋವಿಡ್ ಔಷದಿ ಕಿಟ್ ಗಳನ್ನು ನೀಡಲಾಗುತ್ತಿದೆ. ಯಾರಿಗೂ ಆರೋಗ್ಯದ ಸಮಸ್ಯೆಯಾಗಬಾರದೆಂಬುವುದೇ ನಮ್ಮ ಮೂಲಭೂತ ಉದ್ದೇಶವಾಗಿದೆ.
ಪಕ್ಕದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಗಳು ಸಿಗದಂತಾಗಿರುವುದರಿಂದ ನಮ್ಮ ಜಿಲ್ಲೆಯಲ್ಲಿಯೇ ಕೋವಿಡ್ ಸೋಂಕಿತರಿಗೆ ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಅಗತ್ಯ ವ್ಯವಸ್ಥೆ ಒದಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾದ್ಯವಾದರೆ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಸಾರ್ವಜನಿಕರು ಸಹ ಯಾವುದೇ ಒತ್ತಡವಿಲ್ಲದೆ ಸಾಮಾಜಿಕ ಅಂತರದೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಜನರೂ ಬದುಕಬೇಕು ಹಾಗೂ ಜನಜೀವನ ಕೂಡ ನಡೆಯಬೇಕು ಜಿಲ್ಲೆಯಲ್ಲಿ ವಾರದಲ್ಲಿ 4 ದಿನಗಳ ಕಾಲ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ನಡುವೆ ಸ್ಥಳಿಯ ಆಡಳಿತ ಕೈಗೊಳ್ಳುವ ಕ್ರಮಕ್ಕೆ ಜನರು ಕೂಡ ಸಹಕರಿಸಬೇಕಿದೆ ಎಂದರು.
ಮೂರನೇ ಅಲೆಗೆ ಪೂರ್ವ ಮುಂಜಾಗ್ರತಾ ಕ್ರಮ: ಕೊರೋನಾ ಮೂರನೇ ಅಲೆಗೆ ಮುಂದಿನ ದಿನಗಳಲ್ಲಿ ಆಯಾ ರಾಜ್ಯ ಹಾಗೂ ಜಿಲ್ಲೆಗಳ ಪರಿಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು. ದೊಡ್ಡವರು ಕೋವಿಡನ್ನು ಹೇಗೋ ಎದುರಿಸುತ್ತಾರೆ. ಆದರೆ ಮಕ್ಕಳು ಅದನ್ನು ಎದುರಿಸುವುದು ತೀವ್ರ ಕಷ್ಟ. ಹಾಗಾಗಿ ನಿವೃತ್ತ ಮಕ್ಕಳ ತಜ್ಞ ವೈದ್ಯರನ್ನು ಗುರುತಿಸಿ ಅವರನ್ನು ಸೇವೆಗೆ ಕರೆಸಿಕೊಳ್ಳುವ ಚಿಂತನೆ ನಡೆದಿದೆ. ಮಕ್ಕಳ ಬವಿಷ್ಯದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.
ಶ್ಲಾಘನಿಯ: ಮಾಜಿ ಸಚಿವ ಆರ್.ವಿ ದೇಶಪಾಂಡೆ ಹಾಗೂ ಅವರ ತಂಡದವರು ಅನೇಕ ಕಡೆಗಳನ್ನು ಔಷದಿ ಕಿಟ್, ಆಕ್ಸಿಜನ್ ಗಳನ್ನು ನೀಡುವ ಮೂಲಕ ಸೇವೆ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ. ಕಾಂಗ್ರೆಸ್, ಬಿಜೆಪಿ, ಹಾಗೂ ಜೆ.ಡಿಎಸ್ ಸೇರಿದಂತೆ ಮೂರು ಪಕ್ಷಗಳ ಮೇಲೆಯೂ ಜಿಲ್ಲೆಯ ಜನರ ರುಣವಿದೆ. ಅಲ್ಪ ಸೇವೆ ಮಾಡುವ ಮೂಲಕ ರುಣ ತೀರಿಸಬೇಕಿದೆ. ಕಷ್ಟ ಕಾಲದಲ್ಲಿ ದಾನವನ್ನು ಜಿಲ್ಲೆಯ ಜನ ಎಂದಿಗೂ ಮರೆಯುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ ಕಾರ್ಯನಿರ್ವಹಣಾಧಿಕಾರಿ (ಸಿ.ಇ.ಒ) ಪ್ರಿಯಾಂಗಾ ಎಂ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್ ಪಾಟೀಲ, ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.