ಕೋವಿಡ್ ಪಾಲನೆ ಉಲ್ಲಂಘಿಸಿದರೆ ಕಠಿಣ ಕ್ರಮ

ಹಾವೇರಿ:ಏ.17: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ತೀವ್ರತರವಾಗಿ ಹೆಚ್ಚಳವಾಗುತ್ತಿದೆ ಕೋವಿಡ್ ಸೋಂಕಿನ ನಿಯಂತ್ರಣ, ಚಿಕಿತ್ಸೆಗೆ ವೈದ್ಯಕೀಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಸೋಂಕು ಹರಡದಂತೆ ಸಾರ್ವಜನಿಕರು ಸರ್ಕಾರದ ಕೋವಿಡ್ ನಿಯಮಗಳನ್ನು ಸ್ವಯಂ ಪ್ರೇರಣೆಯಿಂದ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೇ ದಂಡ ಪ್ರಕ್ರಿಯೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.
ಕೋವಿಡ್ ಎರಡನೇ ಅಲೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಹಾಸಿಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಹಾವೇರಿ ತಾಲೂಕಿನ ಬಸಾಪೂರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಅಗತ್ಯಬಿದ್ದರೆ ರಾಣೆಬೆನ್ನೂರು ತಾಲೂಕಿನಲ್ಲೊಂದು ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ 540 ಆಕ್ಸಿಜನ್ ಸಹಿತ ಬೆಡ್‍ಗಳ ವ್ಯವಸ್ಥೆ ಇದೆ. 950ಕ್ಕೂ ಹೆಚ್ಚು ಬೆಡ್‍ಗಳ ವ್ಯವಸ್ಥೆ ಹೊಂದಲಾಗಿದೆ. ತಾಲುಕಾ ಆಸ್ಪತ್ರೆಗಳಲ್ಲಿ 190 ಜಂಬೋ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಹೊಂದಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 6 ಕೆ.ಎಲ್ ಆಕ್ಸಿಜನ್ ಟ್ಯಾಂಕ್ ಅಳವಡಿಸಲಾಗಿದೆ. ಎಲ್ಲವೂಗಳ ಸುಸ್ಥಿತಿ ಕುರಿತು ಪರಿಶೀಲಿಸಲಾಗಿದೆ. ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು.
ಕೊರತೆ ಇಲ್ಲ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಲಸಿಕೆ ಬೆಳಗಾವಿಯಿಂದ ಪೂರೈಕೆಯಾಗುತ್ತಿದೆ. ಈಗಾಗಲೆ 1,11298 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಗುರುವಾರ 7 ಸಾವಿರ ಡೋಸ್ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ನಿರ್ದೇಶನದಂತೆ ಲಸಿಕೆ ಹಾಕಲಾಗುತ್ತದೆ. ಈಗಾಗಲೇ ಶೇ.75 ರಷ್ಟು ಕೋವಿಡ್ ವಾರಿಯರ್‍ಗಳಿಗೆ ಲಸಿಕೆ ಹಾಕಲಾಗಿದೆ. ದಿನಕ್ಕೆ 5ರಿಂದ 6ಸಾವಿರ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಆದರೇ ಬೇರೆ ಬೇರೆ ಕಾರಣಗಳಿಗಾಗಿ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಕೋವಿಡ್ ಬಗ್ಗೆ ಭಯ ಇಲ್ಲದಂತಾಗಿದೆ. ಈ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಲಸಿಕೆ ಪ್ರಮಾಣವನ್ನು ಹೆಚ್ಚಳ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಗಂಭೀರ ಪರಿಸ್ಥಿತಿ ಇರುವ ಕೋವಿಡ್ ಪಾಜಿಟಿವ್ ರೋಗಿಗಳಿಗೆ ಮಾತ್ರ ರಮಿಡಿಸಿವರ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 510 ಡೋಸ್ ರಮಿಡಿಸಿವರ್ ಲಸಿಕೆ ದಾಸ್ತಾನಿದೆ. ಯಾವುದೇ ಕೊರತೆ ಇರುವುದಿಲ್ಲ ಹಾಗೂ ಸಾಮಾನ್ಯ ಜನರಿಗೆ ನೀಡುವ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಸಹ ಕೊರತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇ-ಸಂಜೀವಿನಿ: ಕೋವಿಡ್ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಪಡೆಯಲು ತೊಂದರೆಯಾಗದಂತೆ ಕೇಂದ್ರ ಸರ್ಕಾರ ಇ-ಸಂಜೀವಿನಿ ಓಪಿಡಿ ಆಪ್ ಸೇವೆಯನ್ನು ಆರಂಭಿಸಿದೆ. ಮೊಬೈಲ್‍ಗಳಲ್ಲಿ ಈ ಆಪ್‍ನ್ನು ಡೌನ್‍ಲೋಡ್‍ಮಾಡಿಕೊಂಡು ನೋಂದಾಯಿಸಿಕೊಂಡರೆ ವೆಬ್‍ವಿಡಿಯೋ ಹಾಗೂ ಆನ್‍ಲೈನ್ ಮೂಲಕ ರೋಗಿಗಳಿಗೆ ವೈದ್ಯರು ಮನೆಯಿಂದಲೇ ಚಿಕಿತ್ಸೆ ನೀಡಲಿದ್ದಾರೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್, ಮಾನಸಿಕ ಕಾಯಿಲೆ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಜನಸಾಮಾನ್ಯರು ಮನೆಯಿಂದಲೇ ಚಿಕಿತ್ಸೆ ಪಡೆಯಬಹುದಾಗಿದ್ದು, ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಆಸ್ಪತ್ರೆಗಳನ್ನು ಸಂಪರ್ಕಿಸಲು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ಡಾ.ಜಗದೀಶ, ಡಾ,.ವಿರಕ್ತಿಮಠ ಇತರರು ಉಪಸ್ಥಿತರಿದ್ದರು.