ಕೋವಿಡ್ ಪರೀಕ್ಷೆಗೆ ವರದಾನವಾದ ಸಿಟಿ ಸ್ಕ್ಯಾನ್

ಬಾಗಲಕೋಟೆ,ಮೇ.4 : ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಟಿ ಸ್ಯ್ಕಾನ್ ಕೇಂದ್ರವು ಕೋವಿಡ್ ಪರೀಕ್ಷೆ ದೃಢಿಕರಿಸುವಲ್ಲಿ ಉತ್ತಮ ಸೇವೆ ಮಾಡುತ್ತಿದೆ. ಈವರೆಗೆ ಸುಮಾರು 800 ಕೋವಿಡ್ ಪ್ರಕರಣಗಳನ್ನು ಈ ಕೇಂದ್ರದಲ್ಲಿ ದೃಢಿಕರಿಸಲಾಗಿದೆ ಎಂದು ಕೇಂದ್ರದ ರೇಡಿಯೋಲಾಜಿಸ್ಟ್ ಪ್ರವೀಣ ಮಿಸಾಳೆ ತಿಳಿಸಿದ್ದಾರೆ.
ಆರ್‍ಟಿಪಿಸಿಆರ್‍ನಲ್ಲಿ ಕೋವಿಡ್ ದೃಢಪಟ್ಟ ನಂತರ ಕೋವಿಡ್‍ನ ಪ್ರಮಾಣ ಎಷ್ಟಿದೆ ಎಂಬುವುದನ್ನು ಎಚ್‍ಆರ್‍ಸಿಟಿ(ಹೈ ರಿಸೋಲುಶನ್ ಕಂಪ್ಯೂಟೆಡ್ ಟೊನೋಗ್ರಾಫಿ) ಮೂಲಕ ಕಂಡು ಹಿಡಿಯಲಾಗುತ್ತದೆ. ಎದೆ ಭಾಗದಲ್ಲಿ ಶ್ವಾಸಕೋಶಗಳಲ್ಲಿರುವ ಕೋವಿಡ್ ಪ್ರಮಾಣ ನಿಖರವಾಗಿ ಹೇಳುವ ಎಚ್‍ಆರ್‍ಸಿಟಿ ಉತ್ತಮ ತಂತ್ರಜ್ಞಾನವಾಗಿರುತ್ತದೆ ಎನ್ನುತ್ತಾರೆ ಪ್ರವೀಣ.
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿದಿನ 40 ರಿಂದ 50 ಪ್ರಕರಣಗಳನ್ನು ಟಿಸಿ ಸ್ಕ್ಯಾನನಲ್ಲಿ ಪರೀಕ್ಷಿಸಲಾಗುತ್ತದೆ. ತೀರ ತೊಂದರೆ ಅನುಭವಿಸುವ ಪ್ರಕರಣಗಳನ್ನು ವೈದ್ಯರ ನಿರ್ದೇಶನದ ಮೇರೆಗೆ ನೇರವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ. ಪ್ರತಿಶತ 5 ರೊಳಗಿನ ಕೋವಿಡ್ ಪ್ರಮಾಣ ಹೊಂದಿರುವವರು ಮನೆಯಲ್ಲಿ ಹೊಂ ಐಸೊಲೇಶನ್ ಒಳಪಡಿಸಬಹುದಾಗಿದೆ.
ಸಿಟಿ ಸ್ಕ್ಯಾನ ಪರೀಕ್ಷೆಯು ಜಿಲ್ಲಾ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿದ್ದು, ಬಡ ರೋಗಿಗಳಿಗೆ ವರದಾನವಾಗಿದೆ. ಈ ಕೇಂದ್ರದಲ್ಲಿ ದೇಹದ ಎಲ್ಲ ಅಂಗಾಂಗಗಳ ಪರೀಕ್ಷೆ ಮಾಡಲಾಗುತ್ತದೆ. ಈವರೆಗೆ ಒಟ್ಟು ಸುಮಾರು 6 ಸಾವಿರ ರೋಗಿಗಳ ವಿವಿಧ ಸಿಟಿ ಸ್ಕ್ಯಾನ್ ಇಲ್ಲಿ ಕೈಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಸಿಟಿ ಸ್ಕ್ಯಾನ್‍ಗೆ ಸುಮಾರು 3 ರಿಂದ 4 ಸಾವಿರ ದರ ಭರಿಸಬೇಕಾಗುತ್ತದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಕೃಷ್ಣ ಡೈನ್ನೊಸ್ಟಿಕ್ ಸಿಟಿ ಸ್ಕ್ಯಾನ್ ಕೇಂದ್ರಗಳನ್ನು ನಡೆಸುತ್ತದೆ.