ಕೋವಿಡ್ ಪರೀಕ್ಷಾ ಕೇಂದ್ರ, ವಾರ್ ರೂಂಗಳ ಸ್ಥಾಪನೆಗೆ ಒತ್ತಾಯ

ಮೈಸೂರು, ಮೇ 1- ಕೊರೊನಾ ಮಹಾಮಾರಿಯ 2ನೇ ಅಲೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿಯೂ ಕೋವಿಡ್ ಪರೀಕ್ಷಾ ಕೇಂದ್ರ ಹಾಗೂ ವಾರ್ ರೂಂಗಳನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ಬೆಳಿಗ್ಗೆ ನಗರದ ಜನದರ್ಶಿನಿ ಅತಿಥಿಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಳೆದ ಹತ್ತಾರು ದಿನಗಳ ಹಿಂದೆ ಕೋವಿಡ್ ಮಹಾಮಾರಿಯ 2ನೇ ಅಲೆ ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದ್ದು, ಈಗ ಅದು ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸುತ್ತಿರುವುದರಿಂದ ಸರ್ಕಾರವೂ ಮುನ್ನೆಚ್ಚರಿಕೆ ದೃಷ್ಠಿಯಿಂದ ಗ್ರಾಮಾಂತರ ಪ್ರದೇಶಗಳಲ್ಲೂ ಕೋವಿಡ್ ಪರೀಕ್ಷಾ ಕೇಂದ್ರ ಹಾಗೂ ವಾರ್ ರೂಂಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇದಕ್ಕಾಗಿ ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ಸಮುದಾಯ ಭವನಗಳನ್ನು ಉಪಯೋಗಿಸಿಕೊಳ್ಳುವಂತೆಯೂ ಸರ್ಕಾರಕ್ಕೆ ಸಲಹೆ ನೀಡಿದರು.
ಕೊರೊನಾ ಸೋಂಕಿನಿಂದ ಮರಣ ಹೊಂದಿದ ರೈತರ ಹಾಗೂ ಬಡ ವರ್ಗದವರ ಕುಟುಂಬದವರಿಗೆ ಸರ್ಕಾರದ ವತಿಯಿಂದ ಪರಿಹಾರ ಧನವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಮರಣ ಹೊಂದಿದ ರೈತರು ವಿವಿಧ ಬ್ಯಾಂಕ್‍ಗಳಿಂದ ಪಡೆದಿರುವ ಕೃಷಿ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು.
ಕೆಲವು ಸಚಿವರುಗಳು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ವೆಂಟಿಲೇಟರ್ ಹಾಗೂ ಹಾಸಿಗೆಗಳ ಕೊರತೆ ಇಲ್ಲ ಎಂದು ನೀಡುತ್ತಿರುವ ಹೇಳಿಕೆಯು ಸತ್ಯಕ್ಕೆ ದೂರವಾದುದು. ಅವರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಜನತೆ ಮೆಚ್ಚುವಂತಹ ಕೆಲಸ ಮಾಡುವಂತೆ ಸಲಹೆ ಮಾಡಿದರು.
ಕೊರೊನಾ ವೈರಸ್ ಹಾವಳಿಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಬೆಳೆಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದರಿಂದ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ತರಕಾರಿ ಮತ್ತು ವಿವಿಧ ರೀತಿಯ ಹಣ್ಣುಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ನಿಗದಿಪಡಿಸುವುದರೊಂದಿಗೆ ಇವುಗಳನ್ನು ಸರ್ಕಾರವೇ ಖರೀದಿಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಕೃಷಿಯನ್ನು ಲಾಕ್‍ಡೌನ್ ವ್ಯಾಪ್ತಿಗೆ ತರಬೇಕು. ರೈತರು ತಮ್ಮ ಪ್ರಾಣ ಕಳೆದುಕೊಳ್ಳುವ ಮುನ್ನ ಸರ್ಕಾರ ಇದನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ಕೊರೊನಾ ವೈರಸ್‍ನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಅವಿರತವಾಗಿ ಹೋರಾಡುತ್ತಿರುವ ಆರೋಗ್ಯ ಮತ್ತು ಪೆÇಲೀಸ್ ಇಲಾಖೆ ಸಿಬ್ಬಂದಿಗಳು, ಪೌರ ಕಾರ್ಮಿಕರು, ದಾದಿಯರು ಸೇರಿದಂತೆ ಇನ್ನಿತರರು ಮಾಡುತ್ತಿರುವ ಕಾರ್ಯವೂ ಅತ್ಯಂತ ಶ್ಲಾಘನೀಯವಾದುದು. ಇದಕ್ಕಾಗಿ ಸರ್ಕಾರವು ಅವರಿಗೆ ಬೋನಸ್ ರೂಪದಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಕೋವಿಡ್ ವೈರಸ್‍ನಿಂದ ಬಳಲುತ್ತಿರುವವರಿಗೆ ಶಾಸಕ ಗೋಪಾಲಯ್ಯನವರು ಕೈಗೊಂಡಿರುವ ಸಹಾಯ ಕಾರ್ಯವು ಅತ್ಯಂತ ಶ್ಲಾಘನೀಯವಾದುದು. ಇದು ಇತರೆ 223 ಶಾಸಕರಿಗೂ ಮಾದರಿಯಾಗಬೇಕು ಎಂದು ಶಾಂತಕುಮಾರ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಮೈಸೂರು ನಗರಾಧ್ಯಕ್ಷ ದೇವೇಂದ್ರಕುಮಾರ್ ಆರಾಧ್ಯ ಉಪಸ್ಥಿತರಿದ್ದರು.