ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ

ಮೈಸೂರು:ಡಿ:30: ನಗರದ ವಿವಿದೆಡೆ ಕೋವಿಡ್ ವೈರಸ್ ತಪಾಸಣೆಗಾಗಿ ಆರೋಗ್ಯ ಇಲಾಖಾ ವತಿಯಿಂದ ಸ್ಥಾಪಿಸಲಾಗಿರುವ ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು ಸಂತಸಕರ ಸಂಗತಿ. ಆದರೆ ನಗರದ ಚಿಕ್ಕ ಗಡಿಯಾರದ ಬಳಿ ನಿರ್ಮಿಸಿರುವ ಪರೀಕ್ಷಾ ಕೇಂದ್ರದಲ್ಲೇ ಇಂದು ಬೆಳಿಗ್ಗೆಯಿಂದಲೇ ಕೋವಿಡ್ ವೈರಸ್ ಪರೀಕ್ಷೆಗಾಗಿ 200ಕ್ಕೂ ಹೆಚ್ಚು ಶಾಲಾ ಮಕ್ಕಳು ಆಗಮಿಸಿದ್ದರು. ಇಂದು ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನಲೆಯಲ್ಲಿ ಪರೀಕ್ಷೆಗಾಗಿ ಆಗಮಿಸಿದ್ದ ಹಲವಾರು ಮಕ್ಕಳು ತಲೆಸುತ್ತು ಬಂದು ಕುಸಿದು ಬೀಳುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪರೀಕ್ಷಾ ಕೇಂದ್ರದ ಅಧಿಕಾರಿಗಳ ಮನಕ್ಕೆ ತಂದಾಗ ಅವರು ಇಲಾಖಾ ವತಿಯಿಂದ ನಮಗೆ ಮಾತ್ರ ತಾತ್ಕಾಲಿಕ ಗುಡಾರದ ವ್ಯವಸ್ಥೆ ಮಾಡಲಾಗಿದೆ. ಆದರೆ ಪರೀಕ್ಷೆಗಾಗಿ ಬರುವವರಿಗೆ ಯಾವುದೇ ನೆರಳಿನ ವ್ಯವಸ್ಥೆ ಮಾಡಿಲ್ಲ. ಇದರಲ್ಲಿ ನಮ್ಮ ಪಾಲು ಏನೂ ಇಲ್ಲ ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಇದರಿಂದ ಸಾರ್ವಜನಿಕರು ಆರೋಗ್ಯ ಇಲಾಖಾಧಿಕಾರಿಗಳ ಅವಗಾಹನೆಗೆ ಈ ಮಾಹಿತಿಯನ್ನು ದೂರವಾಣಿ ಮೂಲಕ ತಿಳಿಸಿದರೂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸದಿರುವುದಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಮುಂದಾಗಿದ್ದಾರೆ. ಈ ಬಗ್ಗೆ ಮುಂದಿನ ಆಗು ಹೋಗುಗಳನ್ನು ಕಾಯ್ದು ನೋಡಬೇಕಾಗಿದೆ.