ಕೋವಿಡ್ ನಿರ್ವಹಣೆ ಸರ್ಕಾರ ವಿಫಲ: ಪರಂ

ಕೊರಟಗೆರೆ, ಏ. ೨೦- ಕೋವಿಡ್ ಪರಿಸ್ಥಿತಿ ಮತ್ತು ರಾಜ್ಯ ಸಾರಿಗೆ ನೌಕರರ ಮುಷ್ಕರ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಆರೋಪಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ದಿನ ಕಳೆದಂತೆ ವಿಕೋಪಕ್ಕೆ ಹೋಗುತ್ತಿದೆ. ಅದರೆ ಮಂತ್ರಿಗಳು ತಮ್ಮೊಳಗೆ ಜಗಳ ಮಾಡಿಕೊಂಡು ತದ್ವಿರುದ್ಧ ಹೇಳಿಕೆಗಳನ್ನು ನೀಡಿ ಸರಿಯಾದ ಕ್ರಮ ಕೈಗೊಳ್ಳಲಾಗದೆ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
೪೫ ವರ್ಷದ ಮೇಲ್ಪಟ್ಟ ಶೇ. ೭೫ ಜನರಿಗೆ ಕೋವಿಡ್ ನಿರೋಧಕ ಚುಚ್ಚು ಮದ್ದನ್ನು ಆರೋಗ್ಯ ಇಲಾಖೆ ನೀಡಿಲ್ಲ. ಸರ್ಕಾರ ನಿಗದಿತ ಸಮಯಕ್ಕೆ ಸರಬರಾಜು ಮಾಡಿಲ್ಲ. ಕೊರೊನಾ ವಾರಿಯರ್ಸ್‌ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತರುಗಳಿಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸಲು ಆದೇಶಿಸಿದ್ದಾರೆ. ಅದರೆ ಆ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಮುಂಜಾಗ್ರತಾ ಸಾಮಗ್ರಿಗಳನ್ನು ಇಲ್ಲಿಯವರೆಗೂ ನೀಡಿಲ್ಲ. ಅದೇ ರೀತಿ ಇತರ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೂ ಸರಬರಾಜು ಮಾಡಿಲ್ಲ ಎಂದು ದೂರಿದರು.
ಆದರೆ ಕಳೆದ ಬಾರಿ ಈ ರೀತಿಯಾಗಿಲ್ಲ. ಕೂಡಲೇ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಮೇಲಿನ ನೌಕರರುಗಳಿಗೆ ಹಾಗೂ ಶಾಸಕರ ನಿಧಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸಾರಿಗೆ ನೌಕರರ ಮುಷ್ಕರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೆ ಸಾಮಾನ್ಯ ಜನರ ಕಷ್ಟಗಳಿಗೆ ಕಾರಣವಾಗಿದೆ. ನೌಕರರ ೬ನೇ ವೇತನ ಆಯೋಗವನ್ನು ಜಾರಿ ಮಾಡಲು ಈ ಸಂದರ್ಭದಲ್ಲಿ ಸಾಧ್ಯವಾಗದಿದ್ದರೆ ಅವರೊಂದಿಗೆ ಮಾತನಾಡಿ ಬದಲಿ ವ್ಯವಸ್ಥೆಯನ್ನಾದರೂ ಮಾಡಿ ಮುಷ್ಕರವನ್ನು ಹಿಂಪಡೆಯುವಂತೆ ಮಾಡಬೇಕು. ಇಲ್ಲದಿದ್ದರೆ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾರೆ ಎಂದರು. ಈ ಸಂದರ್ಭದಲ್ಲಿ ಕೋಳಾಲ ಜಿ.ಪಂ. ಸದಸ್ಯ ಶಿವಾರಾಮಯ್ಯ, ತಾ.ಪಂ. ಅಧ್ಯಕ್ಷ ಟಿ.ಸಿ. ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಇಒ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.