ಕೋವಿಡ್ ನಿರ್ವಹಣೆ: ಅಧಿಕಾರಿಗಳೊಂದಿಗೆ ಸಚಿವ ಕತ್ತಿ ಸಭೆ

ಗುಳೇದಗುಡ್ಡ ಮೇ.27-ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು, ಗುಳೇದಗುಡ್ಡ ಪಟ್ಟಣದ ತಾಲ್ಲೂಕಿಗೆ 2ನೇ ಬಾರಿಗೆ ಭೇಟಿ ಮಾಡಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೋರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ವಿಚಾರಿಸಿದರು.
ಕೋರಾನಾ ಲಕ್ಷಣ ಹೊಂದಿದವರಿಗೆ ಔಷಧಿ ಕಿಟ್‍ಗಳನ್ನು ವಿತರಿಸಿ ನಂತರ ಮಾತಾಡಿದ ಉಮೇಶ ಕತ್ತಿ ಅವರು, ಗುಳೇದಗುಡ್ಡ ಪಟ್ಟಣ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮನೆಮನೆಗಳಿಗೆ ತೆರಳಿ ಸರ್ವೇ ಮಾಡಿ ಕೋವಿಡ್ ಲಕ್ಷಣ ಇದ್ದವರಿಗೆ ಔಷಧ ಕಿಟ್ ನೀಡಬೇಕು. ಅವರ ಮೇಲೆ ಸೂಕ್ತ ನಿಗಾ ಇಡುವಂತೆÉ ತಾಲೂಕಾಡಳಿತಕ್ಕೆ ಸೂಚಿಸಿದರು.
ಪಟ್ಟಣದ ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆಗೆ ಹೊಂದಿಕೊಂಡ ಧರ್ಮಶಾಲೆ, ಖುಲ್ಲಾ ಜಾಗೆಯನ್ನು ಸಾರ್ವಜನಿಕ ಉಪಯೋಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಕೋಮು ಸೌಹಾರ್ದತೆ ಕಾಯ್ದುಕೊಂಡು ಧರ್ಮಶಾಲೆ ಖುಲ್ಲಾ ಜಾಗೆ ದುರಸ್ತಿ ಕಾರ್ಯವನ್ನು ನಿಲ್ಲಿಸಿ, ಈ ಮೊದಲು ನಿರ್ಣಯಿಸಿದ ನಿರ್ಣಯದಂತೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಪಟ್ಟಣದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಮಾಶಾಸನ ಬರದೇ ಬಡ ವೃದ್ಧರು ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಕೋರೊನಾದ ಲಾಕ್‍ಡೌನ್ ಪರಿಣಾಮದಿಂದ ಜೊತೆಗೆ ಮಾಶಾಸನ ಬರದೇ ಇದ್ದುದರಿಂದ ಬಡ ವೃದ್ಧರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇದರಿಂದ ಅವರ ಅರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ ಎಂದು ಭಾಜಪ ಮುಖಂಡ ಸಂಪತ್‍ಕುಮಾರ ರಾಠಿ ಅವರು, ಸಚಿವ ಉಮೇಶ ಕತ್ತಿ ಅವರ ಗಮನಕ್ಕೆ ತಂದರು. ತಕ್ಷಣವೇ ಸಚಿವರು ಈ ಬಗ್ಗೆ ತುರ್ತಾಗಿ ಬಡ ವೃದ್ದರ ಮಾಶಾಸನ ಬರುವಂತೆ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಹಶೀಲದಾರರಿಗೆ ಸೂಚನೆ ನೀಡಿದರು.
ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ಭಾಜಪ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ನಾರಾಯಣಸಾ ಬಾಂಡಗೆ, ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸಿಪಿಐ ರಮೇಶ ಹಣಾಪೂರ, ಪಿಎಸ್‍ಐ ಪುಂಡಲೀಕ ಪಠಾತರ, ತಹಶೀಲದಾರ ಜಿ.ಎಂ. ಕುಲಕರ್ಣಿ, ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಡಾ. ಕೆ.ಟಿ.ಗಾಜಿ, ತಾಪಂ ಇಒ ಸಿದ್ದಪ್ಪ ನಕ್ಕರಗುಂದಿ, ಬಸವರಾಜ ಯಂಕಂಚಿ, ಮುಖಂಡ ಸಂಪತ್‍ಕುಮಾರ ರಾಠಿ, ಸಂಜೀವ್ ಕಾರಕೂನ್, ಪುರಸಭೆ ಸದಸ್ಯ ಪ್ರಶಾಂತ ಜವಳಿ, ನಗರ ಭಾಜಪ ಅಧ್ಯಕ್ಷ ವಸಂತಸಾ ಧೋಂಗಡೆ, ದೀಪಕ ನೇಮದಿ, ಮಧುಸೂಧನ ರಾಂದಡ, ಬಸವರಾಜ ಬನ್ನಿ, ಭುವನ ಪೂಜಾರಿ, ರಾಜು ಗೌಡರ, ಬಾಳು ನಿರಂಜನ ಸೇರಿದಂತೆ ಮತ್ತಿತರರಿದ್ದರು.