ಕೋವಿಡ್ ನಿರ್ವಹಣೆಯಲ್ಲಿ ಸುಳ್ಯ ತಾಲೂಕು ವಿಫಲ- ಜಿಲ್ಲಾಧಿಕಾರಿ ಅಸಮಧಾನ

ಸುಳ್ಯ, ಜೂ.೧೦-ಸುಳ್ಯ ತಾಲೂಕಿನಲ್ಲಿ ಹೆಚ್ಚಿನ ಪಾಸಿಟಿವಿಟಿ ದರ ಇದೆ. ತಾಲೂಕಿನಲ್ಲಿ ಟೆಸ್ಟಿಂಗ್ ವೇಗವಾಗಿ ಆಗುತ್ತಿಲ್ಲ. ಪ್ರಾಥಮಿಕ ಸಂಪರ್ಕಿತರನ್ನು ಮಾತ್ರ ಇಲ್ಲಿ ಟೆಸ್ಟಿಂಗ್ ಮಾಡಲಾಗುತ್ತಿದೆ. ದ.ಕದಲ್ಲಿ ಹೆಚ್ಚಿನ ಪಾಸಿಟಿವಿಟಿ ದರ ಕಾಣಲು ಸುಳ್ಯ ತಾಲೂಕಿನ ಅಸಮರ್ಪಕ ನಿರ್ವಹಣೆಯೇ ಕಾರಣ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸುಳ್ಯ ತಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಯಾಪಿಡ್ ಟೆಸ್ಟಿಂಗ್ ಅನ್ನು ಸರಿಯಾಗಿ ಮಾಡಬೇಕು. ಸೋಂಕಿತರು ಕಂಡುಬಂದ ಆಸುಪಾಸಿನ ಎಲ್ಲರನ್ನೂ ಚಿಕಿತ್ಸೆಗೆ ಒಳಪಡಿಸಬೇಕು ಎಂದರು. ಟೆಸ್ಟಿಂಗ್ ಹೆಚ್ಚು ಮಾಡಿದಂತೆ ಪಾಸಿಟಿವಿಟಿ ದರ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಪಾಸಿಟಿವಿಟಿ ದರ ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದರು.
ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ವ್ಯಕ್ತಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದರೆ ಈ ಕುರಿತು ಆ ವೈದ್ಯರು ಇಲಾಖೆಗೆ ಮಾಹಿತಿ ನೀಡಬೇಕು. ಈ ಕುರಿತು ಸಭೆ ನಡೆಸಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಮಾಹಿತಿ ನೀಡಬೇಕು ಎಂದರು. ಕೋವಿಡ್ ಸೋಂಕಿತರು ಹೋಂ ಐಸೋಲೇಶನ್ ವೇಳೆ ಅವರಿಗೆ ಪ್ರತ್ಯೇಕ ಸ್ನಾನಗೃಹ, ಶೌಚಾಲಯ ವ್ಯವಸ್ಥೆ ಇಲ್ಲದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ರವಾನೆ ಮಾಡಬೇಕು. ಆಹಾರದ ಸಮಸ್ಯೆ ಇದ್ದವರೂ ಕೇರ್ ಸೆಂಟರ್‌ಗೆ ದಾಖಲಾಗಬಹುದು. ಒಂದುವೇಳೆ ಮನೆಯ ಹೆಚ್ಚಿನ ಎಲ್ಲರೂ ಸೋಂಕಿಗೆ ತುತ್ತಾಗಿದ್ದರೆ ಮಾತ್ರ ಅವರಿಗೆ ಗ್ರಾ.ಪಂ. ವತಿಯಿಂದ ಆಹಾರ ಮತ್ತಿತರ ವ್ಯವಸ್ಥೆ ಮಾಡಿಸಬೇಕು ಎಂದರು. ಎಲ್ಲಾ ೬ ಆರೋಗ್ಯ ಕೇಂದ್ರ ಹಾಗೂ ನ.ಪಂ. ವ್ಯಾಪ್ತಿಗಳಲ್ಲಿ ೧೦೦ -೨೦೦ ಟೆಸ್ಟಿಂಗ್ ಮಾಡಬೇಕು ಎಂದು ಗುರಿ ನೀಡಲಾಗಿದೆ. ಇದರ ನಿರ್ವಹಣೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು. ಸದ್ಯ ತಾಲೂಕಿನ ಕೆ.ವಿ.ಜಿ ಆಸ್ಪತ್ರೆಯಲ್ಲಿ ಟೆಸ್ಟ್ ರಿಪೋರ್ಟ್ ಅನ್ನು ೨೪ ಗಂಟೆಗಳಲ್ಲಿ ನೀಡಲಾಗುತ್ತಿದ್ದು ಟೆಸ್ಟಿಂಗ್ ಪ್ರಮಾಣ ಹೆಚ್ಚು ಮಾಡಬಹುದು ಎಂದರು. ನರೇಗಾದ ಅಡಿಯಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಸೋಂಕಿನ ಲಕ್ಷಣ ಕಂಡುಬಂದರೆ ಅವರನ್ನು ಟೆಸ್ಟ್ ಮಾಡಿಸಬೇಕು ಎಂದು ಡಿಸಿ ಸೂಚಿಸಿದರು.
ಸಹಾಯವಾಣಿ ಮಾಹಿತಿ ನೀಡದಕ್ಕೆ ಅಸಮಧಾನ: ಒಬ್ಬ ವ್ಯಕ್ತಿ ಸೋಂಕಿಗೆ ತುತ್ತಾದರೆ ಆತ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ನೀಡಿದ್ದೀರಾ. ಈ ಕುರಿತು ಪತ್ರಿಕಾ ಗೋಷ್ಠಿ ಕರೆದ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕುರಿತು ಸಾಕ್ಷಿ ಇದೆಯಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯಾಧಿಕಾರಿ ಡಾ.ನಂದಕುಮಾರ್ ತಹಶಿಲ್ದಾರ್ ಅನಿತಾಲಕ್ಷ್ಮೀ ,ನ.ಪಂ. ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿ ಶಂಕರ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಚಂದ್ರ ಜೋಗಿ ಅವರ ಜೊತೆ ನಿಯಮ ಪಾಲನೆಗಳ ಹಾಗೂ ಸ್ಥಿತಿಗತಿಗಳ ಕುರಿತು ಸವಿವರ ಪಡೆದರು. ಅಸಮರ್ಪಕ ವರದಿ ನೀಡುವ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಎ.ಸಿ ಯತೀಶ್ ಉಲ್ಲಾಳ್, ಸಿಎಸ್ ಡಾ.ಕುಮಾರ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.