ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಕಾಶಂಪುರ್ ಆರೋಪ

ಬೀದರ:ಎ.28: ಕೋವಿಡ್ ಸೋಂಕಿತರಿಗೆ ಆಂಬುಲನ್ಸ್, ಬೆಡ್, ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಸೋಂಕಿನಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಅನೇಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೋಂಕಿತರಿಗೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಲಾಕ್‍ಡೌನ್ ಮಾಡಿದರೆ ಪ್ಯಾಕೇಜ್ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮದ ಹೆಸರಲ್ಲಿ ರಾಜ್ಯದಲ್ಲಿ 14 ದಿನಗಳ ಅಘೋಷಿತ ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದೆ.ಜೀವನೋಪಾಯಕ್ಕೆ ದುಡಿಮೆಯನ್ನು ಅವಲಂಬಿಸಿರುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ಪ್ಯಾಕೇಜ್ ನೀಡಿಲ್ಲ. ರೈತರ ಸಂಕಷ್ಟ ಪರಿಹರಿಸುವ ಕೆಲಸವನ್ನೂ ಮಾಡಿಲ್ಲ ಎಂದು ಟೀಕಿಸಿದ್ದಾರೆ.
ಸರ್ಕಾರ ದಿನಕ್ಕೊಂದು, ಕ್ಷಣಕ್ಕೊಂದು ಆದೇಶಗಳ ಬದಲಾವಣೆ, ಮಾರ್ಪಾಡು ಮಾಡುವ ಮೂಲಕ ಜನರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಕೋವಿಡ್ ಸೋಂಕು ಹೆಚ್ಚಾಗಿರುವ ಪ್ರಯುಕ್ತ ಸಾರ್ವಜನಿಕರು ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಅನಾವಶ್ಯಕ ಸುತ್ತಾಟ ನಿಲ್ಲಿಸಬೇಕು. ಬಹಳಷ್ಟು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.