ಕೋವಿಡ್ ನಿರ್ವಹಣೆಗೆ ಕೆ.ಕೆ.ಆರ್.ಡಿ.ಬಿ.ಯಿಂದ 100 ಕೋಟಿ

ಕಲಬುರಗಿ,ಮೇ.28-ಕೋವಿಡ್ ನಿರ್ವಹಣೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ವಿಭಾಗದ ಆರು ಜಿಲ್ಲೆಗಳಿಗೆ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.
ಮಂಡಳಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿಯ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಮಂಡಳಿಯಿಂದ 2021-22ನೇ ಸಾಲಿನ ಕ್ರೀಯಾ ಯೋಜನೆ ಅಡಿಯಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ವಿಭಾಗದ ಆರು ಜಿಲ್ಲೆಗಳಿಗೆ ಅಗತ್ಯವಾಗಿರುವ ವೈದ್ಯಕೀಯ ಸಾಮಗ್ರಿಗಳ ಖರೀದಿಗಾಗಿ ಈ ಹಣ ನೀಡಲಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಸಾಮಗ್ರಿಗಳ ಖರೀದಿಗಾಗಿ ಮಂಡಳಿಯಿಂದ ವೈದ್ಯಕೀಯ ತಜ್ಞರ ತಂಡ ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ತಮ್ಮ ಹಂತದಲ್ಲಿಯೇ ಟೆಂಡರ್ ಮುಖಾಂತರ ವೈದ್ಯಕೀಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ನಿರ್ವಹಣೆಗಾಗಿ 2021-22ನೇ ಸಾಲಿನ ಮ್ಯಾಕ್ರೋ ಅನುದಾನದಡಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಬೀದರ್ ಜಿಲ್ಲೆಗೆ ರೂ.13.74 ಕೋಟಿ, ಯಾದಗಿರಿ 19.34 ಕೋಟಿ, ರಾಯಚೂರು 31.48 ಕೋಟಿ, ಕೊಪ್ಪಳ 22.51 ಕೋಟಿ, ಬಳ್ಳಾರಿ 15.38 ಕೋಟಿ ರೂ.ಮಂಜೂರು ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಗೆ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ರೂ.6.25 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.
@12bc = ಎರಡು ಆಸ್ಪತ್ರೆ ನಿರ್ಮಾಣ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಲಬುರಗಿ ದಕ್ಷಿಣ ಮತ್ತು ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಎರಡು ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
@12bc = ಬಿ.ಎಸ್.ವೈ ನಮ್ಮ ನಾಯಕರು
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದತ್ತಾತ್ರೇಯ ಪಾಟೀಲ ರೇವೂರ ಅವರು, ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಅವರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಮುಖ್ಯಮಂತ್ರಿಯಾಗಿ ಅವರು ಅವರ ಅವಧಿ ಪೂರೈಸಲಿದ್ದಾರೆ ಎಂದರು.
@12bc = ಅಭಿನಂದನೆ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ 28 ಕೋಟಿ ರೂ.ವೆಚ್ಚದಲ್ಲಿ ಎಂ.ಎಸ್.ಕೆ.ಮಿಲ್ ಕಣ್ಣಿ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆ ಹಾಗೂ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾಮಗಾರಿಗೆ ಮಂಡಳಿಯಿಂದ ಮಂಜೂರಾತಿ ಪಡೆದು ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು. ಮೇ.27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕಣ್ಣಿ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆ ಹಾಗೂ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರೆತಿದೆ. ಅಲ್ಲದೆ ಹಾಗರಗಾ ವಸತಿ ಯೋಜನೆಯು ಕೂಡ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಗೊಂಡಿದೆ ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.