ಕೋವಿಡ್ ನಿಯಮ ಪಾಲಿಸಿ, ಸಹಕರಿಸಿ-ಪಾತ್ರೋಟ

ಧಾರವಾಡ, ಏ.16: 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು, ಲಸಿಕೆಯು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಕೋವಿಡ್ -19 ಗೆ ಸಂಬಂಧಿಸಿದ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್.ಪಾತ್ರೋಟ ಹೇಳಿದರು.

     ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪುರೋಹಿತ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ 130 ನೇ ಜಯಂತಿ ನಿಮಿತ್ಯ ಏರ್ಪಡಿಸಲಾಗಿದ್ದ ಕೊರೊನಾ ಲಸಿಕಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯ ವೈದ್ಯಾಧಿಕಾರಿ ಡಾ. ಸುಭಾಷ್ ಮಾತನಾಡಿ, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಲಸಿಕೆ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗುತ್ತಿದೆ. ಲಸಿಕೆಯಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ತಿಳಿಸಿದರು.

    ಧಾರವಾಡ ತಾಲೂಕಿನ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಬಾಡಗಿ ಮಾತನಾಡಿ, ಕೊರೋನಾ ಲಸಿಕೆ ಪಡೆದುಕೊಳ್ಳುವ ಮೂಲಕ ಎಲ್ಲರೂ ಸರ್ಕಾರದ ಜೊತಗೆ ಕೈಜೋಡಿಸಬೇಕು ಆಗಲೇ ನಾವು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ ಎಂದರು.

   ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದÀ ಪವಿತ್ರಾ ಚಪ್ಪರದ, ಮೀನಾಕ್ಷಿ ಕುರಂದವಾಡ, ವಿಜಯಲಕ್ಷ್ಮೀ ಶೆಟ್ಟರ, ಪ್ರೇಮಾ ಬಳ್ಳಾರಿ, ನವೀನ ಇಳಿಗೇರ ಹಾಗೂ ಸಾರ್ವಜನಿಕರು ಹಾಜರಿದ್ದರು.

   ಆರೋಗ್ಯ ಕಾರ್ಯಕರ್ತೆ ಅರ್ಚನಾ ಇಟಗಟ್ಟಿ ಸ್ವಾಗತಿಸಿ, ವಂದಿಸಿದರು.