ಕೋವಿಡ್ ನಿಯಮ ಪಾಲಿಸಿ, ಲಸಿಕೆ ತೆಗೆದುಕೊಳ್ಳಿ: ಸಂಸದ ಜಿಗಜಿಣಗಿ ಮನವಿ

ವಿಜಯಪುರ, ಏ.27-ಜಿಲ್ಲೆಯಲ್ಲಿ ಕೊರೊನಾ ಉಲ್ಭಣಿಸುತ್ತಿರುವದರಿಂದ ಸರಕಾರದ ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ಸಂಸದ ರಮೇಶ ಜಿಗಜಿಣಗಿ ಜನರಲ್ಲಿ ಮನವಿ ಮಾಡಿದ್ದಾರೆ. ಅನಿವಾರ್ಯವಿದ್ದರೆ ಹೊರಬನ್ನಿ. ಹೊರಬರುವಾಗ ಮುಖಕ್ಕೆ ಮಾಸ್ಕ್ ಧರಿಸಿ, ಆಗಾಗ ಕೈತೊಳೆದುಕೊಳ್ಳಿ. ಇದರಿಂದ ಕೋವಿಡ್ ನಿಯಂತ್ರಣ ಸಾಧ್ಯ ಎಂದವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೆ ದಿನೆ ಏರುತ್ತಿದೆ. ಇದಕ್ಕೆ ನಿಯಮ ಉಲ್ಲಂಘನೆಯೆ ಪ್ರಮುಖ ಕಾರಣ. ಜನ ನಿಯಮ ಪಾಲಿಸಿದರೆ ಇನ್ನೊಬ್ಬರಿಗೆ ಹರಡುವದನ್ನು ತಪ್ಪಿಸಿಬಹುದು. ಆಸ್ಪತ್ರೆಗಳಲ್ಲಿ ಕೊರತೆಗಳ ಆಗರವೆ ಇದೆ. ಇದಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವದೆ ಕಾರಣ. ಇದನ್ನು ಅರಿತಾದರೂ ಜನ ಸರಕಾರ ಜಾರಿಗೊಳಿಸಿದ ನಿಯಮಗಳನ್ನು ತಪ್ಪದೆ ಪಾಲಿಸಲು ಅವರು ಕಳಕಳಿಯ ಮನವಿ ಮಾಡಿದ್ದಾರೆ.
ಹಾಗೆಯೆ ಜನ ಲಸಿಕೆ ಹಾಕಿಸಿ ಕೊಳ್ಳಬೇಕು. ಅದರ ಅಗತ್ಯತೆ ಇಲ್ಲ ಎಂದು ಅನಾಸಕ್ತಿ ತೋರಿಸುತ್ತಿರುವದು ಸರಿ ಅಲ್ಲ. ಸರಕಾರ ಬಡವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಸಿಕೆ ಲಸಿಕೆ ಪೂರೈಸುತ್ತಿದೆ. ಇದರ ಲಾಭ ಪಡೆದು ಕೋವಿಡ್‍ನಿಂದ ಎಲ್ಲರೂ ಬಚಾವಾಗೋಣ ಎಂದವರು ಹೇಳಿದ್ದಾರೆ. ಜಿಲ್ಲಾಡಳಿತ ಕೂಡ ಹೆಚ್ಚು ಅರಿವು ಮೂಡಿಸಿ ಜನರಿಗೆ ಲಸಿಕೆ ಕೊಡುವ ಕೆಲಸ ಮಾಡಬೇಕೆಂದು ಅವರು ಕೋರಿದ್ದಾರೆ.