ಕೋವಿಡ್ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ


ಗದಗ,ಎ.4: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ನೂತನ ಮಾರ್ಗಸೂಚನೆಗಳ ಪಾಲನೆಯಲ್ಲಿ ನಿಷ್ಕಾಳಜಿ ಸಹಿಸುವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹೇಳಿದರು.
ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರ ನೂತನ ಮಾರ್ಗಸೂಚಿಗಳನ್ನು ನೀಡಿದ್ದು ಅವುಗಳು ಜಿಲ್ಲೆಯಲ್ಲಿ ತಕ್ಷಣದಿಂದ ಜಾರಿಗೊಳಿಸುವ ಮೂಲಕ ಸರಿಯಾಗಿ ಪಾಲನೆಯಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿರುವುದರಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಿ ವಸತಿ ನಿಲಯಗಳಲ್ಲಿರುವ ಮಕ್ಕಳನ್ನು ಅವರುಗಳ ಮನೆಗೆ ತಕ್ಷಣ ಕಳುಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು 10, 11, 12 ತರಗತಿಗಳು ಪ್ರಸ್ತುತ ಇರುವಂತೆ ಮುಂದುವರೆಯುತ್ತವೆ. ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾಗಿ ಕಡ್ಡಾಯವಾಗಿರುವುದಿಲ್ಲ. ಉನ್ನತ ಶಿಕ್ಷಣ, ವೃತ್ತಪರ ಕೋರ್ಸುಗಳ ತರಗತಿಗಳಲ್ಲಿ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ನಿರ್ದೇಶಿಸಿದರು.
ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿದ್ದು ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಅಪಾರ್ಟಮೆಂಟ್ , ಕಾಂಪ್ಲೆಕ್ಸ್ಗಳಲ್ಲಿ ಜಿಮ್ ಪಾರ್ಟಿ ಹಾಲ್‍ಗಳು , ಈಜುಗೊಳ, ಇತ್ಯಾದಿಗಳನ್ನು ಬಂದ್ ಮಾಡಲು ತಿಳಿಸಿದರು. ಯಾವುದೇ ತರಹದ ರ್ಯಾಲಿಗಳು, ಮುಷ್ಕರ , ಧರಣಿ ನಡೆಸುವುದನ್ನು ನಿಷೇಧಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪಾಲನೆಯೊಂದಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೂ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು. ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು , ಸ್ಯಾನಿಟೈಜರ್ ಹ್ಯಾಂಡ್ ವಾಶ್‍ಗಳ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕು. ಈ ನಿಯಮಗಳು ಎಲ್ಲ ಸಾರ್ವಜನಿಕ ಸ್ಥಳಗಳಿಗೂ ಅನ್ವಯಿಸಲಿದ್ದು ಉಲ್ಲಂಘಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ, ಜಾತ್ರೆ ಮಹೋತ್ಸವಗಳು, ಮೇಳಗಳು ಗುಂಪು ಸೇರುವುದರ ನಿಷೇಧವನ್ನು ಮುಂದುವರೆಸಲಾಗಿದೆ. ಮಾರ್ಚ 12ರ ಕೋವಿಡ್ ಮಾರ್ಗಸೂಚಿಗಳನ್ವಯ ಸಾಮಾಜಿಕ ಆಚರಣೆ, ಮದುವೆ , ಧಾರ್ಮಿಕ ಆಚರಣೆ, ಸಮಾರಂಭಗಳಲ್ಲಿ ತೆರೆದ ಪ್ರದೇಶಗಳಾಗಿದ್ದರೆ 500 ಜನ ಮೀರದಂತೆ ಹಾಗೂ ಸಭಾಂಗಣಗಳು ಹಾಲ್ ಮುಂತಾದ ಮುಚ್ಚಿದ ಪ್ರದೇಶಗಳಾಗಿದ್ದಲ್ಲಿ 200 ಜನರಿಗೆ ಅವಕಾಶ ನೀಡಲಾಗಿದೆ. ಜನ್ಮ ದಿನ , ನಿಧನ, ಶವ ಸಂಸ್ಕಾರ ಮತ್ತು ಅಂತ್ಯಕ್ರಿಯೆ ಹಾಗೂ ಇತರೆ ಸಮಾರಂಭಗಳ ಆಚರಣೆಗೆ ತೆರೆದ ಪ್ರದೇಶಗಳಾಗಿದ್ದರೆ 100 ಜನ ಮತ್ತು ಸಭಾಂಗಣ ಹಾಲ್ ಮುಚ್ಚಿದ ಪ್ರದೇಶಗಳಾಗಿದ್ದರೆ 50 ಜನರಿಗೆ ಅವಕಾಶ ನೀಡಲಾಗಿದೆ. ಈ ಸೂಚನೆಗಳನ್ನು ಸಾರ್ವಜನಿಕರು ಪಾಲಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಧಿಕಾರಿಗಳದ್ದಾಗಿದ್ದು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಎಂ ಮಾತನಾಡಿ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೊಂದರಂತೆ ಕೋವಿಡ್ ಕೇರ್ ಸೆಂಟರ್ ಅಗತ್ಯವಿದ್ದಲ್ಲಿ ಆರಂಭಕ್ಕೆ ಪೂರ್ವ ಯೋಜಿತವಾಗಿ ಸ್ಥಳ , ಕಟ್ಟಡ ಗುರುತಿಸಿಟ್ಟುಕೊಳ್ಳಬೇಕು ಹಾಗೂ ಆ ಕಟ್ಟಡದಲ್ಲಿ ಅಗತ್ಯದ ಮೂಲಭೂತ ಸೌರ್ಯಗಳಿರುವಂತೆ ನೋಡಿಕೊಳ್ಳಬೇಕೆಂದು ತಹಶೀಲ್ದಾರರುಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಜಾನುವಾರುಗಳ ಸಂರಕ್ಷಣೆ ಮತ್ತು ಮೇವಿನ ಲಭ್ಯತೆ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಿದರು. ಸಕಾಲ ಭೂಮಿ ಯೋಜನೆಗಳ ಕುರಿತು ಪ್ರಗತಿ ಕುಂಠಿತವಾದ ತಾಲೂಕುಗಳ ಅಧಿಕಾರಿಗಳು ನಿಗಾ ವಹಿಸಬೇಕು. ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಾವಣಿ ಕಾರ್ಯ ಶೀಘ್ರ ಮುಕ್ತಾಯಕ್ಕೆ ತಿಳಿಸಿದರು. ಅಲ್ಲದೇ 2020 ನೇ ಸಾಲಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆ , ಸೇತುವೆ ದುರಸ್ತಿ ಕುರಿತು ತಾಲೂಕಾ ಟಾಸ್ಕ್ ಫೆÇೀರ್ಸದಲ್ಲಿ ಚರ್ಚಿಸಿ ನಡುವಳಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿ.ಎಚ್.ಓ ಡಾ. ಸತೀಶ ಬಸರಿಗಿಡದ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ. ಗೊಜನೂರ, ಡಿಡಿಪಿಯು ರಾಜಪ್ಪ , ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಮ್ಮ ಹೊಸಮನಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರವಿ ಗುಂಜೀಕರ್, ಶಿಕ್ಷಣ ಇಲಾಖೆಯ ಬಾರಾಟಕ್ಕೆ , ತಹಶೀಲ್ದಾರರುಗಳು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಇದ್ದರು.