ಕೋವಿಡ್ ನಿಯಮ ಜಾರಿ ಪೊಲೀಸ್‌ರ ಜವಬ್ದಾರಿ


ಬೆಂಗಳೂರು, ಏ. ೨೧- ಕೊರೊನಾ ತಡೆಯಲು ಸರ್ಕಾರ ಜಾರಿ ಮಾಡಿರುವ ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದು ಗೃಹ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಸೇರಿದಂತೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಇವುಗಳ ಪಾಲನೆ ಕಟ್ಟುನಿಟ್ಟಾಗಿ ಆಗಬೇಕು. ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡುವುದಾಗಿ ಅವರು ಆರ್.ಟಿ.ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಕೊರೊನಾ ಸುರಕ್ಷತಾ ನಿಯಮಗಳು ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ ಎಂದರು.
ಜನ, ಸಮಾಜ ಮತ್ತು ರಾಜ್ಯದ ಆರೋಗ್ಯ ದೃಷ್ಠಿಯಿಂದ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಜನ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸರ್ಕಾರ ಕೈಗೊಂಡಿರುವ ಕಠಿಣ ನಿಯಮಗಳ ಜಾರಿ ತೀರ್ಮಾನದ ಹಿಂದೆ ಜನರ, ಸಮಾಜದ, ರಾಜ್ಯದ ಆರೋಗ್ಯ ಇದೆ. ಇದನ್ನು ಅರ್ಥ ಮಾಡಿಕೊಂಡು ನಿಯಮಗಳನ್ನು ಪಾಲಿಸಬೇಕು ಎಂದು ಅವರು ಜನತೆಯಲ್ಲಿ ಮನವಿ ಮಾಡಿದರು.
ಇಂದಿನಿಂದ ರಾತ್ರಿ ೯ ಗಂಟೆಯಿಂದ ಬೆಳಿಗ್ಗೆ ೬ ರವರೆಗೆ ನೈಟ್ ಕರ್ಫ್ಯೂ, ಶುಕ್ರವಾರ ರಾತ್ರಿ ೯ ರಿಂದ ಸೋಮವಾರ ಬೆಳಿಗ್ಗೆ ೬ರ ವರೆಗೆ ವಾರಾಂತ್ಯ ಕರ್ಫ್ಯೂವನ್ನು ಜಾರಿ ಮಾಡಲಾಗುವುದು. ಕರ್ಫ್ಯೂ ಅನುಷ್ಠಾನವನ್ನು ಬಿಗಿಯಾಗಿ ಮಾಡಲು ಅಗತ್ಯ ಕ್ರಮಗಳನ್ನು ಗೃಹ ಇಲಾಖೆ ಕೈಗೊಂಡಿದೆ ಎಂದರು.