ಕೋವಿಡ್ ನಿಯಮ ಕಡ್ಡಾಯ ವಿಘ್ನವಾಗದಂತೆ ಗಣೇಶೋತ್ಸವ ಆಚರಿಸಲು ಕರೆ

                                                                                
ಕೂಡ್ಲಿಗಿ.ಸೆ.7 :- ಕೊರೋನಾ ಮಹಾಮಾರಿ ಹಿನ್ನೆಲೆಯಿಂದ ಸರ್ಕಾರಿ ಆದೇಶದಂತೆ ಕೋವಿಡ್ ನಿಯಮ ಪಾಲಿಸಿ ಯಾವುದೇ ವಿಘ್ನವಾಗದಂತೆ ಅಹಿತಕರ ಘಟನೆ ಸಂಭವಿಸದಂತೆ ಕೆಲವು ನಿಭಂದನೆಗಳನ್ವಯ ಪಾರಂಪರಿಕ ಗಣೇಶೋತ್ಸವ ಆಚರಿಸುವಂತೆ  ಕೂಡ್ಲಿಗಿ ತಹಸೀಲ್ದಾರ್ ಟಿ. ಜಗದೀಶ್ ಗಣೇಶ ಪ್ರತಿಷ್ಠಾಪನಾ ಆಯೋಜಕರಿಗೆ ಕಿವಿ ಮಾತು ಹೇಳಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆವತಿಯಿಂದ ಆಯೋಜಿಸಿದ ಗಣೇಶೋತ್ಸವ ಶಾಂತಿಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತ ಕೊರೋನಾ ಮೂರನೇ ಅಲೆ ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯನ್ನಿಟ್ಟುಕೊಂಡು ಸರ್ಕಾರವು ಕೋವಿಡ್ ನಿಯಮ ಬಳಸಿ ಆದೇಶಿಸಿದಂತೆ ಗಣೇಶೋತ್ಸವ ಆಯೋಜಕರು ಸರ್ಕಾರದ ನಿಭಂದನೆಯಂತೆ ಗಣೇಶ ಪ್ರತಿಷ್ಠಾಪಿಸಿ ಯಾವುದೇ ವಿಘ್ನ ಬರದಂತೆ ನೋಡಿಕೊಳ್ಳುವಂತೆ ತಹಸೀಲ್ದಾರ್ ತಿಳಿಸಿದರು.
ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಮಾತನಾಡಿ ಸರ್ಕಾರವು ಪಾರಂಪರಿಕ ಗಣೇಶೋತ್ಸವ ಆಚರಣೆಯನ್ನು ಸರಳವಾಗಿ ಆಚರಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿ ನೀಡಿದ್ದು ಅದೇ ನಿಯಮ ಪಾಲಿಸಿಕೊಳ್ಳಬೇಕು  ಗಣೇಶ ಪ್ರತಿಷ್ಠಾಪನೆ ಮಾಡುವ ಆಯೋಜಕರು ಬಳಸಿಕೊಳ್ಳಬೇಕಾದ ನಿಯಮವೆಂದರೆ ದೇವಸ್ಥಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 4ಅಡಿ  ಹಾಗೂ ತಮ್ಮ ತಮ್ಮ ಮನೆಗಳಲ್ಲಿ 2ಅಡಿ ಗಣೇಶ ಮೂರ್ತಿ ಆದರಲ್ಲಿ ಮುಖ್ಯವಾಗಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ನಗರ ಪ್ರದೇಶದಲ್ಲಿ ವಾರ್ಡಿಗೊಂದರಂತೆ ಗ್ರಾಮೀಣ ಪ್ರದೇಶದಲ್ಲಿ ಊರಿಗೊಂದರಂತೆ ಗಣೇಶ ಪ್ರತಿಷ್ಠಾಪಿಸಬೇಕು ಗಣೇಶ ಕೂಡಿಸಲು 3ಅಥವಾ 5ದಿನಗಳು ಮಾತ್ರ ಅವಕಾಶ ಸೀಮಿತವಾಗಿದೆ.  
ಗಣೇಶ ಪ್ರತಿಷ್ಠಾಪನೆ ಆಯೋಜಕರಿಗೆ ಕೋವಿಡ್ ಟೆಸ್ಟ್ ಮತ್ತು ಲಸಿಕೆ ಕಡ್ಡಾಯವಾಗಿದ್ದು ನೆಗೆಟಿವ್ ವರದಿ ಬಂದರೆ ಮಾತ್ರ ಅವಕಾಶ ನೀಡುವುದು ಮತ್ತು ಕೇವಲ 20ಮಂದಿ ಸೀಮಿತವಾಗಿದ್ದು ಪಾರಂಪರಿಕ ಗಣೇಶೋತ್ಸವಕ್ಕೆ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ಸಾರ್ವಜನಿಕ ಮತ್ತು ವಾಹನ ಸಂಚಾರಕ್ಕೆ  ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಮತ್ತು ಡಿ ಜೆ ಹಾಗೂ ಇತರೆ ಮನೋರಂಜನೆಗೆ ಸಂಗೀತಕ್ಕೆ ಯಾವುದೇ ಅವಕಾಶ ಇರುವುದಿಲ್ಲ ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜನೆಗೊಳಿಸುವಾಗ ಮೆರವಣಿಗೆಗೂ ಅವಕಾಶ ಇರುವುದಿಲ್ಲ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಅತೀ ಕಡಿಮೆ ಜನಸಂಖ್ಯೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಮೀಪದಲ್ಲಿ ಸ್ಥಳೀಯ ಆಡಳಿತ ನಿರ್ಮಿಸಿದ ಹೊಂಡದಲ್ಲಾಗಲಿ ಅಥವಾ ಮೊಬೈಲ್ ಟ್ಯಾಂಕರ್ ಗಳಲ್ಲಾಗಲಿ ಹಾಗೂ ಕೃತಕ ಟ್ಯಾಂಕರ್ ಗಳಲ್ಲಿ ವಿಸರ್ಜಿಸಬೇಕು ಎಂದು ಸರ್ಕಾರಿ ಆದೇಶದ ನಿಯಮವನ್ನು ತಿಳಿಸಿದರು
ಕೂಡ್ಲಿಗಿ ಪಿಎಸ್ಐ ಶರತಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ನಿಯಮ ಪರವಾನಿಗೆ ಬಳಸದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದಲ್ಲಿ ಮುಲಾಜಿಲ್ಲದೆ ಅಂತಹ ಆಯೋಜಕರ ಮೇಲೆ ಕಾನೂನು ನಿಯಮ ಉಲ್ಲಂಘನೆ ನಿಟ್ಟಿನಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ಗಣೇಶೋತ್ಸವ ಹಬ್ಬವನ್ನು ಅದೇ ರೀತಿ ಆಚರಿಸಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗತರದಂತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಹೇಳಿದರು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬಂತೆ ಕೋವಿಡ್ ನಿಯಮ ಪಾಲಿಸಿದರೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಪಿಎಸ್ಐ ತಿಳಿಸಿದರು.   
ಈ ಸಂದರ್ಭದಲ್ಲಿ ಕೂಡ್ಲಿಗಿ ಜೆಸ್ಕಾಂ ಇಲಾಖೆಯ ಎಇಇ ಏಕಾಂತಪ್ಪ ಆಲೂರು, ಕೂಡ್ಲಿಗಿ ಅಪರಾಧ ವಿಭಾಗದ ಪಿಎಸ್ಐ ಮಲ್ಲಿಕ್ ಸಾಬ್ ಕಲಾರಿ ಮತ್ತು ಗಣೇಶ ಪ್ರತಿಷ್ಠಾಪನೆಯ ಕೂಡ್ಲಿಗಿ ಠಾಣಾ ಸರಹದ್ದಿನ ಗ್ರಾಮೀಣ ಹಾಗೂ ಪಟ್ಟಣದ ಆಯೋಜಕರು ಉಪಸ್ಥಿತರಿದ್ದರು.