ಕೋವಿಡ್ ನಿಯಮ ಉಲ್ಲಂಘಿಸಿದ ಅಂಗಡಿಗಳು ಸೀಜ್

ಬಾದಾಮಿ, ಏ27: ಪಟ್ಟಣದಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡುತ್ತಿರುವ ಕುರಿತು ತಹಶೀಲ್ದಾರ್ ಸುಹಾಸ ಇಂಗಳೆ, ಸಿಪಿಐ ರಮೇಶ ಹಾನಾಪೂರ, ಪುರಸಭೆಯ ಮುಖ್ಯಾಧಿಕಾರಿ ಜ್ಯೋತಿಗಿರೀಶ ನೇತೃತ್ವದ ತಂಡವು ನಗರದಾದ್ಯಂತ ಸಂಚರಿಸಿ ಪರಿಶೀಲನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮದುವೆ ಕಾರ್ಯಕ್ಕೆ ಭೇಟಿ ನೀಡಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಯಿತು. ಸರಕಾರದ ಆದೇಶ ಮತ್ತು ಕೋವಿಡ್ ನಿಯಮ ಉಲ್ಲಂಘಿಸಿ ತೆರೆಯಲಾಗಿದ್ದ ಮೊಬೈಲ್, ಫುಟ್ ವೇರ್ ಅಂಗಡಿ ಸೇರಿದಂತೆ 5 ಅಂಗಡಿಗಳನ್ನು ಸೀಜ್ ಮಾಡಲಾಯಿತು.
ನಗರದ ಮುಖ್ಯ ರಸ್ತೆಯಲ್ಲಿ, ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ತೆರೆಯಲಾಗಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದರು. ಗ್ರಾಮೀಣ ಭಾಗಗಳಿಂದ ನಗರಕ್ಕೆ ಬಂದಂತಹ ಜನರು ಮಾಸ್ಕ ಧರಿಸದವರಿಗೆ ಪೆÇಲೀಸರು ಬಿಸಿ ಮುಟ್ಟಿಸಿದರು. ಪಿ.ಎಸ್.ಐ.ಪ್ರಕಾಶ ಬಣಕಾರ ಮತ್ತು ಪೊಲೀಸ್ ಸಿಬ್ಬಂದಿಗಳು ಸರಾಫ ಬಜಾರನಲ್ಲಿ ಕೆಲವು ಅಂಗಡಿಗಳನ್ನು ಮುಚ್ಚಿಸಿದರು. ಬೈಕ್ ನಲ್ಲಿ ಸಂಚರಿಸುವವರು ಕೆಲವರು ಮಾಸ್ಕ್ ಹಾಕದೇ ಇರುವುದು ಕಂಡು ಬಂದಿತು. ಸರಕಾರದ ಆದೇಶದಂತೆ ಜನರು ಸಹ ನಿಯಮ ಪಾಲನೆ ಮಾಡುವುದರ ಜೊತೆಗೆ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡರೇ ಮಾತ್ರ ಕೋವಿಡ್ ರೋಗ ಬರದಂತೆ ತಡೆಯಬಹುದು.
ಸಾಮಾಜಿಕ ಅಂತರದೊಂದಿಗೆ ತರಕಾರಿ ಖರೀದಿಸಿದ ಸಾರ್ವಜನಿಕರು; ಸರಕಾರದ ನಿಯಮಗಳಂತೆ ಪುರಸಭೆ ವತಿಯಿಂದ ಸೋಮವಾರದಿಂದ ಬಸ್ ನಿಲ್ದಾಣದ ಎದುರಿನ ತಾ.ಪಂ.ವಸತಿ ಗೃಹಗಳ ಜಾಗದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರದೊಂದಿಗೆ ತರಕಾರಿ, ಹಣ್ಣುಗಳನ್ನು ಖರೀದಿಸಿದರು. ಪುರಸಭೆ ವತಿಯಿಂದ ಹಾಕಲಾಗಿದ್ದ ಬಾಕ್ಸ್ ಗಳಲ್ಲಿ ಕುಳಿತು ತರಕಾರಿ ವ್ಯಾಪಾರ ಮಾಡಿದರು.