ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ

ಸೈದಾಪುರ:ಎ.22:ಜಗತ್ತನ್ನು ಕಾಡುತ್ತಿರುವ ಕೋವಿಡ್ ನಿಯಂತ್ರಣ ಅನಿವಾರ್ಯವಾಗಿದ್ದು ಸರಕಾರದ ಆದೇಶವನ್ನು ಪ್ರತಿಯೊಬ್ಬರು ಪಾಲಿನೆ ಮಾಡಬೇಕು, ನಿಮಯ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ ಅವರು ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ಕೊರೊನಾ ಮುಂಜಾಗೃತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಮಾರಿ ಕೊರೊನಾ ವೈರಸ್‍ನ ಎರಡನೇ ಅಲೆಯು ವ್ಯಾಪಾಕವಾಗಿ ಹರಡುತ್ತಿದ್ದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು ಮರಣದ ಪ್ರಮಾಣದಲ್ಲೂ ಏರಿಕೆಯಾಗಿದ್ದು ಅತ್ಯಂತ ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಹೀಗಾಗಿ ಆಸ್ಪತ್ರೆ ಹಾಗೂ ಇತರ ಅನಿವಾರ್ಯ ಸಂದರ್ಭ ಹೊರತು ಪಡಿಸಿ ಅನವಶ್ಯಕವಾಗಿ ಮನೆಯಿಂದ ಹೊರ ಬರುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜನ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸುವ ಜತೆಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸೈದಾಪುರ ಪೊಲೀಸ್ ಠಾಣೆಯ ಪಿಎಸ್‍ಐ ಭೀಮರಾಯ ಬಂಕ್ಲಿ, ಪ್ರೊಬೆಷನರಿ ಪಿಎಸ್‍ಐ ಕುಮಾರಿ ರೇಣುಕಾ, ಗ್ರಾಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಕಂದಾಯ ನಿರೀಕ್ಷಕ ಮುಸ್ತಾಫ್, ಪಿಡಿಒ ಮೌಲಾಲಿ ಐಕೂರ, ಮುಖಂಡರಾದ ವೆಂಕಣಗೌಡ ಕ್ಯಾತನಾಳ, ಚಂದ್ರುಗೌಡ ಸೈದಾಪುರ, ಈಸೂಫ್, ಶಿವಪ್ಪ ಸೇರಿದಂತೆ ಮುಂತಾದವರಿದ್ದರು.