ಕೋವಿಡ್ ನಿಯಮ ಉಲ್ಲಂಘಿಸಿದರೆ ಕೇಸು ದಾಖಲು: ನಕ್ಕರಗುಂದಿ


ಗುಳೇದಗುಡ್ಡ,ಎ.25: ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರಕಾರದ ನಿಯಮದಂತೆ ಮದುವೆಗೆ ಐವತ್ತು ಜನರು, ಅಂತ್ಯಂಸ್ಕಾರಕ್ಕೆ ಇಪ್ಪತ್ತುಜನರು ಇರಬೇಕು. ಮದುವೆ ಹಾಗೂ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಗ್ರಾಮಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದು, ಜನರಲ್ಲಿ ಕೋವಿಡ್ ನಿಯಮದ ಬಗ್ಗೆ ಜಾಗೃತಿ ಮೂಡಿಸಬೇಕು ಅಲ್ಲದೇ ಕಾರ್ಯಕ್ರಮವನ್ನು ಚಿತ್ರೀಕರಿಸಿಬೇಕು. ಒಂದುವೇಳೆ ಕೋವಿಡ್ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಅಂತವರ ಮೇಲೆ ಪೋಲಿಸ್ ಠಾಣೆಯಲ್ಲಿ ಆಯಾ ಗ್ರಾಮಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಕೇಸು ದಾಖಲಿಸಬೇಕು ಎಂದು ತಾಪಂ ಮುಖ್ಯಕಾರ್ಯನಿವಾಹಣಾಧಿಕಾರಿ ಸಿದ್ದಪ್ಪ ನಕ್ಕರಗುಂದಿ ಹೇಳಿದರು.
ಅವರು ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಕೋವಿಡ್ ಮಾರ್ಗಸೂಚಿ ಸಭೆಯಲ್ಲಿ ಮಾತನಾಡಿದರು.
ಸಿಪಿಐ ರಮೇಶ ಹನಾಪೂರ ಮಾತನಾಡಿ, ಸರಕಾರದ ಹೊಸ ಮಾರ್ಗಸೂಚಿಯಂತೆ ಮೇ.4ರವರೆಗೆ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕಪ್ರ್ಯೂ ಜಾರಿಯಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ದವಾಖಾನೆ, ಔಷಧಿ ಅಂಗಡಿ, ಕಟ್ಟಡ ಸಂಬಂಧಿಸಿದ ಅಂಗಡಿಗಳು, ನ್ಯಾಯಬೆಲೆ ಅಂಗಡಿ, ಹಾಲು, ತರಕಾರಿ, ಕಿರಾಣಿಅಂಗಡಿಗೆ ಮಾತ್ರ ಅವಕಾಶವಿದ್ದು, ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಬೇಕು. ಜನರು ಅನಗತ್ಯವಾಗಿ ಹೊರಗೆ ಅಡ್ಡಾಡಬಾರದು. ಅಗತ್ಯವಿದ್ದಾಗ ಮಾತ್ರ ಮಾಸ್ಕ್ ಧರಿಸಿ ಸಂಚರಿಸಬೇಕು. ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ವೀಕೆಂಡ್ ಕಪ್ರ್ಯೂ ಜಾರಿಯಲ್ಲಿರುತ್ತದೆ ಎಂದರು. ವೀಕೆಂಡ್ ಕಪ್ರ್ಯೂ ಜಾರಿಯಲ್ಲಿ ್ರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಹಾಲು ಹಾಗೂ ತರಕಾರಿ ಮಾರಾಟಕ್ಕೆ ಅವಕಾಶವಿದೆ. ಔಷಧಿ ಅಂಗಡಿ, ಆಸ್ಪತ್ರೆಗಳನ್ನು ಹೊರತು ಪಡಿಸಿ ಎಲ್ಲ ಬಂದ್ ಮಾಡಬೇಕು. ಜನರು ಅನಾವಶ್ಯಕವಾಗಿ ಹೊರಗೆ ಬರುವಂತಿಲ್ಲ.
ತಹಶೀಲ್ದಾರ ಜಿ.ಎಂ. ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪತಹಶೀಲ್ದಾರ ವಿರೇಶ ಬಡಿಗೇರ,. ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಪಿಎಸ್‍ಐ ಪುಂಡಲೀಕ ಪಟಾತರ, ಕಂದಾಯ ನಿರೀಕ್ಷಕ ಮಹಾಂತೇಶ ಅಂಗಡಿ, ಪಿಡಿಓಗಳಾದ ಸಾವಿತ್ರಿ ಮಾಶಾಳ, ರಾಮಚಂದ್ರ ಮೇತ್ರಿ, ಶಿಲ್ಪಾ ರ್ಯಾಖಿ, ಶಿವಕುಮಾರ ರಾಜನಾಳ, ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ನಂದಿಕೇಶ್ವರಮಠ, ಗ್ರಾಮ ಲೆಕ್ಕಾಧಿಕಾರಿ ಸಂಗಯ್ಯ ಪಾರ್ವತಿಮಠ ಮತ್ತಿತರರು ಇದ್ದರು.