ಕೋವಿಡ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ-ಜಿಲ್ಲಾಧಿಕಾರಿ


ಧಾರವಾಡ,ಏ.17: ಕೋವಿಡ್ 2ನೇ ಅಲೆ ತೀವ್ರವಾಗಿ ವ್ಯಾಪಿಸುವುದನ್ನು ತಡೆಯಲು ಸರ್ಕಾರ ಜಾರಿಗೊಳಿಸಿರುವ ಸುರಕ್ಷತಾ ಕ್ರಮಗಳನ್ನು ಜಿಲ್ಲೆಯಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಸಿಲಾಗುತ್ತಿದೆ. ಜಾತ್ರೆ, ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ. ಮದುವೆ ಸಮಾರಂಭಗಳಿಗೆ ಸರ್ಕಾರ ನಿಗದಿಪಡಿಸಿದ ಸಂಖ್ಯೆಗಿಂತ ಅಧಿಕ ಜನ ಸೇರಿದರೆ ವಧು-ವರ, ಪಾಲಕರು ಹಾಗೂ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಎಫ್‍ಐಆರ್ ದಾಖಲಿಸಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ಜನತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಕಂದಾಯ ಸಚಿವ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಇಂದು ಬೆಂಗಳೂರಿನಿಂದ ವಿಡಿಯೋ ಸಂವಾದದ ಮೂಲಕ ನಡೆಸಿದ ಸಭೆಯಲ್ಲಿ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಭಾಗವಹಿಸಿದ ಅವರು, ಈ ಮಾಹಿತಿ ನೀಡಿದರು.

ಭಾರತ ಸರ್ಕಾರದ ಗೃಹ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಹೊರಡಿಸಿರುವ ಆದೇಶಕ್ಕನುಗುಣವಾಗಿ ಮಾತ್ರ ಸಾಮಾಜಿಕ ಆಚರಣೆಗಳು, ಸಮಾರಂಭಗಳು, ಮದುವೆ, ಇತರೆ ಸಮಾರಂಭಗಳಿಗೆ ಅವಕಾಶವಿದೆ. ಧಾರ್ಮಿಕ ಆಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ಹಾಲ್‍ಗಳು, ಪಬ್, ಬಾರ್ ಮತ್ತು ರೆಸ್ಟೊರೆಂಟ್‍ಗಳು ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಬೇಕು. ಈ ಆದೇಶ ಜಾರಿ ಮಾಡಲು ಪೊಲೀಸ್ ಆಯುಕ್ತರು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಸಹಯೋಗದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಚುರುಕಾಗಿ ಕಾರ್ಯನಿರ್ವಹಿಸಲಾಗುವುದು.

ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಮತ್ತು ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಜನತೆ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಜಾತ್ರೆ, ಧಾರ್ಮಿಕ ಉತ್ಸವಗಳನ್ನು ಸಂಪೂರ್ಣವಾಗಿ ಕೈಬಿಡಬೇಕು. ಮದುವೆ ಸಮಾರಂಭಗಳಿಗೆ ಪೂರ್ವಾನುಮತಿ ಪಡೆದು ನಿಯಮಾನುಸಾರ ಅವಕಾಶವಿರುವಂತೆ ತೆgರೆದ ಪ್ರದೇಶಗಳಲ್ಲಿ 200 ಜನ ಹಾಗೂ ಸಭಾಂಗಣ ಅಥವಾ ಒಳಾಂಗಣಗಳಲ್ಲಿ 100 ಜನರಿಗೆ ಮೀರದಂತೆ  ಮಾತ್ರ ಜನರು ಭಾಗವಹಿಸಬಹುದು. ಈ ನಿಯಮ ನಿರ್ಲಕ್ಷಿಸಿದರೆ ವಧು-ವರ, ಪಾಲಕರು, ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ರೆಮಿಡಿಸಿವರ್ ನ್ಯಾಯಯುತ ಬಳಕೆಗೆ ಸೂಚನೆ: ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ರೆಮಿಡಿಸಿವರ್ ಚುಚ್ಚುಮದ್ದನ್ನು ಖಾಸಗಿ ಆಸ್ಪತ್ರೆಗಳು ನ್ಯಾಯೋಚಿತವಾಗಿ ಬಳಸಬೇಕು ಹಾಗೂ ಅತ್ಯಗತ್ಯವಿರುವ ರೋಗಿಗಳಿಗೆ ನೀಡಬೇಕು ಎಂದು ಸಹಾಯಕ ಔಷಧ ನಿಯಂತ್ರಕ ಕೆ.ಎಸ್.ಮಲ್ಲಿಕಾರ್ಜುನ್ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಅಗತ್ಯಕ್ಕನುಗುಣವಾಗಿ ಇಂಜೆಕ್ಷನ್ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳು ಅವಶ್ಯಕತೆಯಿರುವ ರೋಗಿಗಳಿಗೆ ಮಾತ್ರ ಈ ಚುಚ್ಚುಮದ್ದನ್ನು ನೀಡಬೇಕು. ಕೆಲವರು ಅಗತ್ಯವಿಲ್ಲದಿದ್ದರೂ ಇಂಜೆಕ್ಷನ್ ಪಡೆಯಲು ಬಯಸುತ್ತಾರೆ. ಬಯಸಿದವರಿಗೆ ಇಂಜೆಕ್ಷನ್ ನೀಡುವುದಕ್ಕಿಂತ ಮುಖ್ಯವಾಗಿ ಅಗತ್ಯವಿರುವವರಿಗೆ ದೊರೆಯುವಂತೆ ಎಚ್ಚರ ವಹಿಸಬೇಕು ಎಂದು ಅವರು ಕೋರಿದ್ದಾರೆ.