ಕೋವಿಡ್ ನಿಯಮ ಉಲ್ಲಂಘನೆಯಾದಲ್ಲಿ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಏ.೨- ಜಿಲ್ಲೆಯಲ್ಲಿ ಕೋವಿಡ್ -೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ರೋಗ ಹರಡುವಿಕೆಯ ಆತಂಕ ಪುನಃ ಪ್ರಾರಂಭವಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವೆಂದು ಮನಗಂಡು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಕಲಂ(೨೬) ಹಾಗೂ (೩೪) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ ೫೯ ಸಿಜಿ ಎಂ ೨೦೨೧ ದಿನಾಂಕ: ೨೫-೦೩-೨೦೨೧ ರಂತೆ ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಗುಡ್ ಫ್ರೈಡೆ ಇತ್ಯಾದಿ ಹಬ್ಬಗಳ ಸಂದರ್ಭಗಳಲ್ಲಿ ಜಿಲ್ಲೆಯ ಯಾವುದೇ ಸಾರ್ವಜನಿಕ ಸ್ಥಳಗಳು/ ಸಾರ್ವಜನಿಕ ಮೈದಾನ, ಸಾರ್ವಜನಿಕ ಉದ್ಯಾನವನಗಳು, ಮಾರುಕಟ್ಟೆಗಳು, ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಸಮಾರಂಭಗಳು , ಸಭೆಗಳನ್ನು ನಡೆಸದಂತೆ ಸೂಚಿಸಲಾಗಿದೆ.
ಸರ್ಕಾರದ ಸೇರ್ಪಡೆ ಆದೇಶ ಸಂ: ಆಕುಕ/೫೯/ಸಿಜಿಎಂ/೨೦೨೧ ದಿನಾಂಕ ೨೭-೦೩-೨೦೨೧ರಂತೆ ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಜಾತ್ರೆಗಳು, ಮೇಳಗಳಲ್ಲಿ ಸಾರ್ವಜನಿಕರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಮೇಲಿನ ಕ್ರಮ ಸಂಖ್ಯೆ (೧) ಮತ್ತು (೨)ನ್ನು ಹೊರತು ಪಡಿಸಿ ಉಳಿದ ಖಾಸಗಿ ಹಾಗೂ ಇತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ ಸಂ ಎಚ್ ಎಫ್ ಡಬ್ಲೂ ೧೪೬ ಸಿಜಿಎಂ ೨೦೨೦ ದಿನಾಂಕ ೨೪-೦೩-೨೦೨೧ರಲ್ಲಿ ಸಮಾರಂಭಗಳಲ್ಲಿ ಭಾಗವಹಿಸಲು ಅತಿಥಿಗಳ ಸಂಖ್ಯೆಯ ಮಿತಿಯನ್ನು ನಿಗದಿಪಡಿಸಲಾಗಿದ್ದು, ಅದರಂತೆ ಕ್ರಮ ವಹಿಸಲಾಗುವುದು.
೧. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಮಾರ್ಗ ಸೂಚಿಗಳ ಉಲ್ಲಂಘನೆಯಾದಲ್ಲಿ ಮುನ್ಸಿಪಲ್ ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲಿ ರೂ. ೨೫೦ನ್ನು ದಂಡ ವಿಧಿಸಲು ಮುಖ್ಯ ಪೇದೆಯ ಶ್ರೇಣಿಗಿಂತ ಕೆಳಗಿನವರಲ್ಲದ ಪೊಲೀಸ್ ಸಿಬ್ಬಂದಿ, ಮುನ್ಸಿಪಲ್ ಕಾರ್ಪೋರೇಷನ್‌ಗಳ ಹೆಲ್ತ್ ಇನ್ಸ್‌ಪೆಕ್ಟರ‍್ಗಳು, ಮುನ್ಸಿಪಲ್ ಕಾರ್ಪೋರೇಷನ್‌ಗಳ ಬಿಲ್ ಕಲೆಕ್ಟರ‍್ಗಳನ್ನು ಅಧಿಕೃತವಾಗಿ ನಿಯೋಜಿಸಲಾಗಿರುತ್ತದೆ.
ಮುನ್ಸಿಪಲ್ ಕಾರ್ಪೋರೇಷನ್‌ಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ರೂ. ೧೦೦ನ್ನು ದಂಡ ವಿಧಿಸಲು ಮುಖ್ಯ ಪೇದೆಯ ಶ್ರೇಣಿಗಿಂತ ಕೆಳಗಿನವರಲ್ಲದ ಪೊಲೀಸ್ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳ ಹೆಲ್ತ್‌ಇನ್ಸ್‌ಪೆಕ್ಟರ‍್ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್‌ನ ಕಾರ್ಯದರ್ಶಿಗಳು, ನಗರ ಸ್ಥಳೀಯ ಸಂಸ್ಥೆಗಳ ಬಿಲ್ ಕಲೆಕ್ಟರ‍್ಗಳನ್ನು ಅಧಿಕೃತವಾಗಿ ನಿಯೋಜಿಸಲಾಗಿರುತ್ತದೆ.
೨. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಈ ಆವರಣಗಳ ಮಾಲಿಕರು ಕೆಳಕಂಡಂತೆ ಜವಾಬ್ದಾರರಾಗಿರುತ್ತಾರೆ. ಹವಾನಿಯಂತ್ರಿತವಲ್ಲದ ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ‍್ಗಳಲ್ಲಿ ರೂ. ೫,೦೦೦ ದಂಡ, ಹವಾನಿಯಂತ್ರಿತ ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ‍್ಗಳು, ಬ್ರಾಂಡೆಡ್ ಶಾಪ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ ರೂ. ೧೦,೦೦೦ ದಂಡವನ್ನು ವಿಧಿಸಲು ಮುಖ್ಯ ಪೇದೆಯ ಶ್ರೇಣಿಗಿಂತ ಕೆಳಗಿನವರಲ್ಲದ ಪೊಲೀಸ್ ಸಿಬ್ಬಂದಿಗಳು, ನಗರ ಸ್ಥಳೀಯ ಸಂಸ್ಥೆಗಳ ಹೆಲ್ತ್ ಇನ್ಸ್‌ಪೆಕ್ಟರ‍್ಗಳು, ನಗರ ಸ್ಥಳೀಯ ಸಂಸ್ಥೆಗಳ ಬಿಲ್ ಕಲೆಕ್ಟರ‍್ಗಳು, ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್‌ನ ಕಾರ್ಯದರ್ಶಿಗಳನ್ನು ಅಧಿಕೃತವಾಗಿ ನಿಯೋಜಿಸಲಾಗಿರುತ್ತದೆ.
೩. ಸಮಾರಂಭಗಳಲ್ಲಿ ಭಾಗವಹಿಸಲು ನಿಗಧಿಪಡಿಸಿರುವ ಅತಿಥಿಗಳ ಸಂಖ್ಯೆಯ ಮಿತಿಯನ್ನು ಈ ಕೆಳಕಂಡಂತೆ ಜಾರಿಗೊಳಿಸಬೇಕು.
ಮದುವೆ ಸಮಾರಂಭಗಳು – ತೆರೆದ ಸ್ಥಳಗಳಲ್ಲಿ ೫೦೦ ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ ೨೦೦ ಜನರು, ಜನ್ಮ ದಿನ ಹಾಗೂ ಇತರೆ ಆಚರಣೆಗಳು ತೆರೆದ ಸ್ಥಳಗಳಲ್ಲಿ ೧೦೦ ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ ೫೦ ಜನರು, ಮರಣ ಅಥವಾ ಅಂತ್ಯಕ್ರಿಯೆ ತೆರೆದ ಸ್ಥಳಗಳಲ್ಲಿ ೧೦೦ ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ ೫೦ ಜನರು, ಶವ ಸಂಸ್ಕಾರ ಅಥವಾ ಸಮಾಧಿ ಕ್ರಿಯೆ(ಹೂಳುವುದು), ೫೦ಜನರು, ಇತರೆ ಆಚರಣೆ ೧೦೦ ಜನರು, ಧಾರ್ಮಿಕ ಆಚರಣೆ ಹಾಗೂ ಕಾರ್ಯಗಳು, ತೆರೆದ ಸ್ಥಳಗಳಲ್ಲಿ ೫೦೦ ಜನರು, ರಾಜಕೀಯ ಸಮಾವೇಶಗಳು ಅಥವಾ ಕಾರ್ಯಗಳು, ತೆರೆದ ಸ್ಥಳಗಳಲ್ಲಿ ೫೦೦ ಜನರು, ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಆವರಣಗಳ ಮಾಲಿಕರು, ಸಮಾರಂಭಗಳ ಆಯೋಜಕರು/ಸಂಘಟಕರು ಅಥವಾ ಅತಿಥೇಯರು ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಸ್ವತಃ ಜವಾಬ್ದಾರರಾಗಿರುತ್ತಾರೆ.
ತಾರಾ ಶ್ರೇಣಿಯ ಹೋಟೆಲ್‌ಗಳು, ಕನಿಷ್ಠ ೫೦೦ ಜನರು ಸೇರುವ ಸಾಮಾಥ್ರ್ಯ ಹೊಂದಿರುವ ಮದುವೆ ಸಭಾಂಗಣ/ಛತ್ರಗಳು ಹಾಗೂ ಕನ್ವೆನ್ಶನ್ ಹಾಲ್‌ಗಳು ಅಥವಾ ಇಂತಹ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಗಳ ಉಲ್ಲಂಘನೆಯಾದಲ್ಲಿ ರೂ. ೧೦,೦೦೦ ಹಾಗೂ ಸಾರ್ವಜನಿಕ ಸಮಾರಂಭಗಳು ಅಥವಾ ರಾಲಿಗಳು ಅಥವಾ ಆಚರಣೆಗಳ ಆಯೋಜಕರಿಗೆ ರೂ. ೧೦,೦೦೦ ದಂಡ ವಿಧಿಸಲಾಗುವುದು.